My Blog List

Saturday, January 31, 2009

ಸ್ವಾಮಿಯೇ ಶರಣಂ ಅಯ್ಯಪ್ಪ.

ಸ್ವಾಮಿಯೇ ಶರಣಂ ಅಯ್ಯಪ್ಪ.

ಹೋದ ವರ್ಷ Cousin ರಾಘು ಅವರ ಅಪ್ಪ ೧೯ನೇಬಾರಿ ಶಬರಿಮಲೆಗೆ ಹೋರಟಾಗ ಕರೆದಿದ್ದರು. ರಜೆ ಸಿಗದ ಕಾರಣ ಹೋಗೋದಕ್ಕೆ ಆಗಿರ್ಲಿಲ್ಲ. :(
ಈ ವರ್ಷ ಕೂಡ ಕರೆದರು. ತಕ್ಷಣ ಜೊತೆಗೆ ಹೋಗಲು ಒಪ್ಪಿದೆ. ಕಾರಣ ಹೋದ ವಾರ ತುಂಬಾ ಕೆಲಸವಿತು. ಹಗಲು ರಾತ್ರಿ ದುಡಿದಿದ್ದೆ. (ಹೊಸ ಪ್ರಾಜೆಕ್ಟ್ ಗಿಟ್ಟಿಸಿಕೊಳ್ಳುವುದಕ್ಕೋಸ್ಕರ ಟೆಂಡರ್‍ Quote ಮಾಡಿದ್ದೆ. ಪ್ರಾಜೆಕ್ಟ್ ಸಿಕ್ಕರೆ ಸಂತೋಷ ಆಗುತ್ತೆ.) :)

ಇರ್ಲಿ. ಆ ವಿಷಯ ಈಗ ಬೇಡ.

ಈಗ ವಿಷಯಕ್ಕೆ ಬರುವೆ.
ಶಬರಿಮಲೆಗೆ ಹೋಗಬೇಕೆನ್ನುವ ಆಸೆ ಮುಂಚಿನಿಂದಲೂ ಇತ್ತು. ಕಾರಣಾಂತರಗಳಿಂದ ಹೋಗೋದಕ್ಕೆ ಆಗಿರ್ಲಿಲ್ಲ. ಈ ಬಾರಿ ಮಾಲೆ ಹಾಕಿಕೊಂಡು ವ್ರತ ಮಾಡಿ ಅಯ್ಯಪ್ಪನ ಕೃಪೆಗೆ ಪಾತ್ರನಾಗುವ ಅವಕಾಶ ಸಿಕ್ಕಿತು. ಹಾಗಾಗಿ ತಕ್ಷಣ ಒಪ್ಪಿಕೊಂಡೆ.

ಇಂದು ಬೆಳಿಗ್ಗೆ ಬೇಗ ಎದ್ದು ತಣ್ಣೀರಿನ ಸ್ನಾನ ಮಾಡಿ, ಮನೆದೇವರಾದ ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿ, ಆತನ ಅಪ್ಪಣೆ ಪಡೆದು, ನಂತರ ಅಯ್ಯಪ್ಪನಿಗೂ ಕಾಣಿಕೆ ಸಲ್ಲಿಸಿದೆ.
ಅಮ್ಮ ಕೊಟ್ಟ ಹಾರ್ಲಿಕ್ಸ್ ಕುಡಿದು ಮಲ್ಲೇಶ್ವರದ ಬಳಿಯಿರುವ ಶ್ರೀರಾಂಪುರದಲ್ಲಿರುವ ಅಯ್ಯಪ ದೇವಸ್ಥಾನಕ್ಕೆ ಹೊರಟೆ. On the Way ರಾಘು ತಂದೆಯವವರನ್ನು ಜೊತೆಗೆ ಕರೆದುಕೊಂಡು ದೇವಸ್ಥಾನಕ್ಕೆ ಹೋದೆ.

ಅವರು ಹೇಳಿದಂತೆ ಮುಂಚೆಯೇ ಕೇಸರಿ/ಕಪ್ಪು ಪಂಚೆ, ಉತ್ತರೀಯಗಳನ್ನು ಅಮ್ಮ ಮಲ್ಲೇಶ್ವರಕ್ಕೆ ಹೋಗಿದ್ದಾಗ ಖರೀದಿಸಿದ್ದರು. ಒಂದು ಪಂಚೆ ಹಾಗೂ ಒಂದು ಉತ್ತರೀಯವನ್ನು ತೆಗೆದುಕೊಂಡು ಹೋಗಿದ್ದೆ. ದೇವಸ್ಥಾನಕ್ಕೆ ಅಂಟಿಕೊಂಡಿರುವ ಅಂಗಡಿಯಲ್ಲಿ ಇರುಮುಡಿ ಬ್ಯಾಗ್,ಸೈಡ್ ಬ್ಯಾಗ್, ಗಣೇಶ-ಅಯ್ಯಪ್ಪ-ಸುಬ್ರಹ್ಮಣ್ಯ ದೇವರುಗಳು ಒಟ್ಟಿಗೇ ಇರುವ ಚಿತ್ರಪುಟ ಹಾಗೂ ಮಾಲೆ ಖರೀದಿಸಿ, ನಂತರ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ೫೪ ರುದ್ರಾಕ್ಷಿಗಳುಳ್ಳ ಮಾಲೆಯನ್ನು ಹಾಕಿಕೊಂಡೆ.

ಅರ್ಚಕರು ಅಕ್ಕಿಯನ್ನು, ಎರಡು ಅಚ್ಚು ಬೆಲ್ಲವನ್ನು ನನ್ನಿಂದ ಸ್ವೀಕರಿಸಿದರು.

ನಂತರ ಮನೆಗೆ ಬಂದು ಅಯ್ಯಪ್ಪನ ಭಕ್ತಿಗೀತೆಗಳ ಕ್ಯಾಸೆಟ್ ಹುಡುಕಿದೆ. ಸಿಕ್ಕ ನಂತರ ಮ್ಯೂಸಿಕ್ ಪ್ಲೇಯರಿನಲ್ಲಿ ಹಾಕಿ ಪರೀಕ್ಷಿಸಿದೆ. ಕ್ಯಾಸೆಟ್ ಚೆನ್ನಾಗಿತ್ತು.

ಸಂಜೆ ೫.೩೦ಕ್ಕೆ ಮತ್ತೆ ತಣ್ಣೇರು ಸ್ನಾನ ಮಾಡಿ ಸಾಯಂಕಾಲದ ಸಂಧ್ಯಾವಂದನೆಯನ್ನು ಮಾಡಿದೆ. ನಂತರ ಸಂಕಲ್ಪ ಮಾಡಿಕೊಂಡು ಅಯ್ಯಪ್ಪನಿಗೆ ಧೂಪಾರತಿ ಮಾಡಿ, ಬಾಳೇಹಣ್ಣುಗಳನ್ನು ನೈವೇದ್ಯಕ್ಕೆ ಸಲ್ಲಿಸಿ, ಮಹಾಮಂಗಳಾರತಿ ಮಾಡಿದೆ.
ನಂತರ ಗಣೇಶ, ಅಯ್ಯಪ್ಪ, ಸುಬ್ರಹ್ಮಣ್ಯರ ಅಷ್ಟೋತ್ತರಗಳನ್ನು ಪಠಿಸಿದೆ. ಕೊನೆಯಲ್ಲಿ ೧೦೮ ಶರಣು ಘೋಷಗಳನ್ನು ಜಪಿಸಿದೆ.

ಪೂಜೆ ಮುಗಿಯುವ ಹೊತ್ತಿಗೆ ಅಮ್ಮ ಭಜನೆಯಿಂದ ಬಂದರು. ಅಣ್ಣ(ಅಪ್ಪ) ಕೂಡ ವಾಕಿಂಗ್ ಮುಗಿಸಿ ಮನೆಗೆ ಬಂದರು. ಕಾಫಿ ಕುಡಿಯುತ್ತಾ ಅಯ್ಯಪ್ಪನ ಭಕ್ತಿಗೀತೆಗಳನ್ನು ಕೇಳಿದೆ.

ರಾತ್ರಿ ೯.೩೦ಕ್ಕೆ ಅಕ್ಕಿ ರೊಟ್ಟಿ ಸೇವಿಸಿದೆ. ರಾತ್ರಿ ಊಟ ಮಾಡುವ ಹಾಗಿಲ್ಲ.

ಇನ್ನು ಹದಿನೈದು ದಿನಗಳ ಕಾಲ ಎರಡು ಹೊತ್ತು ಸಂಧ್ಯಾವಂದನೆ ಮಾಡಬೇಕು. ಎರಡು ಹೊತ್ತು ದೇವರಿಗೆ ನೈವೇದ್ಯ ಸಲ್ಲಿಸಬೇಕು. ಬೆಳಿಗ್ಗೆ ಮತ್ತು ರಾತ್ರಿ ತಿಂಡಿ ತಿನ್ನಬೇಕು, ಮಧ್ಯಾಹ್ನ ಮಾತ್ರ ಊಟ ಮಾಡಬೇಕು.
ಹೊರಗಡೆ ಏನೂ ಸೇವಿಸಬಾರದು.

ತುಂಬಾ ನಿಷ್ಠೆಯಿಂದ ವ್ರತವನ್ನು ಆಚರಿಸಬೇಕು ಅಂತ ರಾಘು ಅವರ ತಂದೆ ಕಟ್ಟಪ್ಪಣೆ ಮಾಡಿರುವರು.

ನಾನು ಸಂಧ್ಯಾವಂದನೆಯನ್ನು ದಿನವೂ ಮಾಡೋದ್ರಿಂದ ಭಜನೆಯನ್ನು ಮನೆಯಲ್ಲೇ ಮಾಡಬಹುದಂತೆ.

ನಾನು ಫೆಬ್ರುವರಿ ೧೪ರಂದು ಶಬರಿಮಲೆಗೆ ಹೊರಟು, ಫೆಬ್ರುವರಿ ೧೮ರಂದು ಬೆಂಗಳೂರಿಗೆ ಹಿಂದಿರುಗುವೆ.

ನನ್ನ ಜೊತೆಗೆ ಇನ್ನೂ ಐದು ಜನ ಸೇರ್ಕೋತಾರೆ. ಅವರಲ್ಲಿ ಒಬ್ಬರು ಗುರುಸ್ವಾಮಿಗಳು. ಮತ್ತೊಬ್ಬರು ರಾಘು ಅವರ ತಂದೆ.

ಸ್ವಾಮಿಯೇ ಶರಣಂ ಅಯ್ಯಪ್ಪ.

-ಅನಿಲ್.

Friday, January 30, 2009

ಶುಕ್ರಚಂದ್ರಯುತಿ



ಇಂದು ಸಂಜೆ ಆಗಸದಲ್ಲಿ ಈ ಅಮೋಘ ದೃಶ್ಯ ನೋಡುವ ಸೌಭಾಗ್ಯ ನನ್ನದಾಯಿತು. Smiling

ಶುಕ್ರ - ಚಂದ್ರಯುತಿಯ ಬಗ್ಗೆ ಸ್ನೇಹಿತರು ಹೇಳುತಲೇ ಇದ್ದರು.

ನಿನ್ನೆ ಕಛೇರಿಯಿಂದ ಬರುವಾಗ ನೋಡಿದ್ದೆ. ಆದರೆ ಕ್ಯಾಮೆರಾ ಮನೆಯಲ್ಲಿ ಇದ್ದಿದ್ದರಿಂದ ಫೋಟೊ ತೆಗೆಯುವ ಅವಕಾಶ ಸಿಗಲಿಲ್ಲ.

ಇಂದು ಮರೆಯದೇ ಕ್ಯಾಮೆರಾವನ್ನು ಕಛೇರಿಗೆ ತೆಗೆದುಕೊಂಡು ಹೋಗಿದ್ದೆ.

ಸಂಜೆ ಸುಮಾರು ೬.೩೦ಕ್ಕೆ ಶುಕ್ರ-ಚಂದ್ರಯುತಿಯ ಬಗ್ಗೆ ನೆನಪಾಯ್ತು.

ಕೂಡಲೇ ಕ್ಯಾಮೆರಾ ತೆಗೆದುಕೊಂಡು ಆಫೀಸಿನ Terraceಗೆ ಹೋಗಿ ಕೆಲವು ಚಿತ್ರಗಳನ್ನು ತೆಗೆದೆ.

ಕ್ಯಾಮೆರಾದ ಬ್ಯಾಟೆರಿ ಮುಗಿಯುವುದರಲ್ಲಿತ್ತು.

ಆದರೂ ಕೆಲವು ಚಿತ್ರಗಳನ್ನು ತೆಗೆದೆ.

ನಂತರ ಮನೆಗೆ ಬಂದು ಮತ್ತೊಮ್ಮೆ ಶುಕ್ರ-ಚಂದ್ರಯುತಿಯ ಚಿತ್ರ ತೆಗೆದೆ.

ಮನೆಗೆ ಬಂದು ತೆಗೆದ ಫೋಟೋವನ್ನು ಇಲ್ಲಿ ಅಪ್ಲೋಡ್ ಮಾಡಿರುವೆ.

ನೋಡಿ, ನಿಮ್ಮ ಅನಿಸಿಕೆ ತಿಳಿಸಿ.

Thursday, January 29, 2009

ಸರ್ವಗುಣ ಸಂಪನ್ನ ಕನ್ಯೆ.

ಒಬ್ಬ ಮದುವೆ ವಯಸ್ಸಿನ ಯುವಕ ಕೇಳಿದ "ಮಾನ್ಯರೇ, ನಿಮ್ಮ ಮಗಳು ಒಳ್ಳೇ ಗುಣಗಳನ್ನು ಹೊಂದಿರುವುದರ ಜೊತೆಗೆ ನೋಡಲು ತುಂಬಾ ಸುಂದರವಾಗಿದ್ದಾಳಂತೆ. ನಿಜವಾ?"

ಹುಡುಗಿಯ ತಂದೆ ಉತ್ತರಿಸಿದರು "ಹೌದು! ನನ್ನ ಮಗಳು ಸುಂದರವತಿ, ಜೊತೆಗೆ ಗುಣವತಿ"

"ಆದರೆ, ನಿಮ್ಮ ಮಗಳು ಅಡುಗೆ ಮಾಡಿ, ಮನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾಳೆಯೇ?"

"ಖಂಡಿತ. ಅವಳು ಧರ್ಮವತಿ"

"ನಿಮ್ಮ ಮಗಳಿಗೆ ಕಲೆಯಲ್ಲಿ ಆಸಕ್ತಿಯಿದೆಯೇ?"

"ಅವಳು ಕಲಾವತಿ"

"ಅವಳು ವಿದ್ಯಾಭ್ಯಾಸ ಮಾಡಿದ್ದಾಳೆಯೇ?"

"ಹು. ಅವಳು ವಿದ್ಯಾವತಿ".

"ವೇದಗಳ ಅಧ್ಯಯನ ಮಾಡಿದ್ದಾಳೆಯೇ?"

"ಓಹ್. ಅವಳು ವೇದವತಿ".

ಆ ಯುವಕ ಸಂತೋಷಗೊಂಡು ಸರ್ವಗುಣ ಸಂಪನ್ನಳಾದ ಇವಳೇ ತನಗೆ ತಕ್ಕ ವಧು ಎಂದು ತಿಳಿದು ಆ ಹುಡುಗಿಯನ್ನು ಮದುವೆಯಾಗುತ್ತಾನೆ.

ಒಂದು ವಾರದ ನಂತರ ಆ ಯುವಕ ಮತ್ತೆ ಮಾವನ ಮನೆಗೆ ಬರುತ್ತಾನೆ. ಅವನ ಮುಖ ಬಾಡಿರುತ್ತದೆ.

ಮಾವ "ಯಾಕಪ್ಪ? ಏನಾಯ್ತು? ಏಕೆ ನಿನ್ನ ಮುಖ ಬಾಡಿದೆ? ನಿನ್ನ ಮನದಲ್ಲಿ ಏನೋ ಚಿಂತೆ ಇರೋ ಹಾಗಿದೆ?" ಎಂದು ಕೇಳುತ್ತಾನೆ.

ಅದಕ್ಕೆ ಆ ಯುವಕ "ಮಾವ, ನೀವು ನಿಮ್ಮ ಮಗಳು ಸುಂದರವತಿ, ಗುಣವತಿ, ಧರ್ಮವತಿ, ಕಲಾವತಿ, ವಿದ್ಯಾವತಿ, ವೇದವತಿ ಎಂದೆಲ್ಲಾ ಹೇಳಿದಿರಿ. ಅಲ್ವೇ?"

"ಹೌದು. ಹೇಳಿದೆ."

"ಆದರೆ, ಈಗಾಗಲೇ ಅವಳು ಗರ್ಭವತಿ ಎಂದು ಹೇಳಲು ಮರೆತಿರಲ್ಲಾ?" Sad

Wednesday, January 28, 2009

ಪ್ರೀತಿ, ಪ್ರೇಮ... ಹೀಗೊಂದು Philosophy

ಪ್ರೀತಿ, ಪ್ರೇಮ, Philosophy

ನಾವು ಪ್ರೀತಿಸಿ ಮದುವೆಯಾಗಿದ್ದೀವಿ - ಹಾಗಂತ ಹೇಳ್ತಾರೆ ಕೆಲವರು.

ನಾವು ಮದುವೆಯಾಗಿ ಪ್ರೀತಿಸ್ತಾ ಇದ್ದೀವಿ - ಹೀಗಂತಾರೆ ಹಲವರು.

ಎರಡೂ ಬಗೆಯ ಜನರಿಗೂ ಬದುಕಿನಲ್ಲಿ ಅಹಹಹಾ ಎಂಬಂಥ ಖುಷಿ ದೇವರಾಣೆಗೂ ಸಿಕ್ಕುವುದಿಲ್ಲ ಎಂಬುದು ಪರಮ ಸತ್ಯ.

ಅಂದಮೇಲೆ-ಪ್ರೀತಿಸಿ ಮದುವೆಯಾಗಬೇಕಾ? ಅಥವಾ ಮದುವೆಯಾದ ಮೇಲೆಯೇ ಪ್ರೀತಿಸಬೇಕಾ?

ಉತ್ತರಿಸುವುದು ಕಷ್ಟ.

ಮದುವೆಯ ದಿನಗಳವರೆಗೂ ಪ್ರೀತಿಸುವುದೇ ಬೇಡ ಎನ್ನುವುದಾದರೆ ಕಳ್ಳ ಪ್ರೇಮದ ಪುಳಕವನ್ನು ಕಳೆದುಕೊಳ್ಳಬೇಕಾಗುತ್ತದೆ.

ಇದರರ್ಥ ಇಷ್ಟೇ - ನಾವು, ನೀವೆಲ್ಲ ಪ್ರೇಮಿಸದೇ ಸುಖವಾಗಿರಲಾರೆವು ಮತ್ತು ಪೇಮಿಸಿದರೂ ಸುಖದಿಂದ ಬದುಕಲಾರೆವು!

ನೆನಪಿರಲಿ:

ಪ್ರೀತಿ-ಪ್ರೇಮ ಅನ್ನೋದು ಶುದ್ಧ ಜೂಜು. ಅದನ್ನು ಗೆಲ್ಲುವ ಹಠದಿಂದಲೇ ಆಡಬೇಕು. ಸೋತಷ್ಟೂ ಹಠ ಹೆಚ್ಚಾಗಬೇಕು.

ನಮ್ಮ ಬದುಕೆಂಬುದು ಪ್ರೀತಿಯ ಪರಿಧಿಯೊಳಗೆ ಇರಬೇಕು. ನಾವೆಲ್ಲ ಇದರಲ್ಲೇ ಮುಳುಗಬೇಕು.

ಈಜಿದರೆ ದಡ. ಈಜದಿದ್ದರೆ ದಡವೇ ಗತಿ. ಹೀಗಾಗಿ ಈಜಾಡುತ್ತಲೇ ಇರಬೇಕು.

ಅದೇ ಜೀವನ. ಅದೇ ಪ್ರೇಮ.

-----------------------------------------------------------------

ಮರೆತಿದ್ದೆ: philosophy ನನ್ನದಲ್ಲ. ;)

ಮಿಂಚಂಚೆಯಲ್ಲಿ ಬಂದದ್ದು. :)

*

Tuesday, January 20, 2009

ಲಾಲಿ ಹಾಡು

ನಾನು ಚಿಕ್ಕವನಿದ್ದಾಗ ಮಲಗೋಕ್ಕೆ ತುಂಬಾ ಹಠ ಮಾಡ್ತಿದ್ದೆ ಅಂತ ಆಗಾಗ ಅಮ್ಮ ಹೇಳ್ತಿರ್ತಾರೆ.

ಆಗ ಅಣ್ಣ (ಅಪ್ಪ) ಹಾಡು ಹೇಳಿ ನನ್ನನ್ನು ಮಲಗಿಸ್ತಿದ್ರಂತೆ.

ಲಾಲಿ ಹಾಡು ಅಂದ ಕೂಡಲೆ ನನಗೆ ನೆನಪಾಗುವುದು ಈ ಹಾಡು.

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ

ಕಣ್ಣಲ್ಲಿ ಹುಣ್ಣಿಮೆ ತಂದವನ
ನಗುವಲ್ಲೇ ಮಲ್ಲಿಗೆ ಚೆಲ್ಲುವನಾ
ಚಲುವಲ್ಲೆ ತಾವರೆಯ ನಾಚಿಸುವನ
ಈ ಮನೆಯ ಬೆಳಕಾಗಿ ಬಂದವನ

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ

ಮೇಲುಕೋಟೆಯ ಸ್ವಾಮಿ ಚೆಲುವರಾಯನ
ಬೇಲೂರು ಶ್ರೀ ಚೆನ್ನಕೇಶವನ
ಉಡುಪಿಯಲಿ ವಾಸಿಸುವ ಶ್ರೀ ಕೃಷ್ಣನ
ಶ್ರೀರಂಗಪಟ್ಟಣದಿ ಮಲಗಿದವನ

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ

ಆಲದೆಲೆಯ ಮೇಲೆ ಮಲಗಿದವನ
ಹತ್ತವತಾರದ ಪರಮಾಥ್ಮನ
ಮತ್ತೆ ನಮಗಾಗಿಳೆಗೆ ಬಂದವನ
ಜಗವನ್ನೆ ತೂಗುವ ಜಗದೀಶನ

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ

ಈಗಲೂ ಈ ಹಾಡು ಕೇಳಿದರೆ ನಿದ್ದೆ ಬರುತ್ತೆ. (ಸುಳ್ಳಲ್ಲ).

ಅಂದಹಾಗೆ, ನಿಮ್ಮ ಮೆಚ್ಚಿನ ಲಾಲಿ ಹಾಡು ಯಾವುದು ಅಂತ ಹೇಳ್ತೀರಾ?

-ಅನಿಲ್.