ಒಂದಾನೊಂದು ಕಾಲದಲ್ಲಿ ಒಬ್ಬ ಮರಕಡಿಯುವ ವ್ಯಕ್ತಿ ಒಬ್ಬ ದೊಡ್ಡ ಸೌದೆ ವ್ಯಾಪಾರಿಯ ಬಳಿ ಬಂದು ಕೆಲಸಕೊಡುವಂತೆ ಕೇಳಿದ. ಕೆಲಸವೂ ಸಿಕ್ಕಿತು. ಒಳ್ಳೇ ಸಂಬಳ, ಕೈ ತುಂಬಾ ಕೆಲಸ, ಕೆಲಸ ಮಾಡುವ ವಾತವರಣವೂ ಚೆನ್ನಾಗಿತ್ತು.
ಅದಕ್ಕಾಗಿ ಆ ಮರ ಕಡಿಯುವವ ತುಂಬಾ ಹುಮ್ಮಸ್ಸಿನಿಂದ ಕೆಲಸವನ್ನು ಮಾಡಲು ಒಪ್ಪಿಕೊಂಡ.
ಒಂದು ದಿನ ವ್ಯಾಪಾರಿಯು ಮರಕಡಿಯುವವನಿಗೆ ಒಂದು ಕೊಡಲಿಯನ್ನು ಕೊಟ್ಟು, ಮರಗಳನ್ನು ಕಡಿಯಬೇಕಾದ ಜಾಗವನ್ನು ತೋರಿಸಿದ.
ಮೊದಲನೆಯ ದಿನ, ಮರಕಡಿಯುವವನು ಹದಿನೈದು ಮರಗಳನ್ನು ಕಡಿದು ತಂದನು.
ವ್ಯಾಪಾರಿಯು ಇವನ ಕೆಲಸವನ್ನು ಮೆಚ್ಚಿ ಅಭಿನಂದಿಸಿ, ಹೀಗೇ ಕೆಲಸವನ್ನು ಮಾಡು ಎಂದ.
ಈ ಮಾತುಗಳಿಂದ ಮತ್ತಷ್ಟು ಪ್ರೇರಿತನಾಗಿ ಮುಂದಿನ ದಿನ ಕಷ್ಟ ಪಟ್ಟು ಹತ್ತು ಮರಗಳನ್ನು ಕಡಿದು ತಂದನು. ಮೂರನೆಯ ದಿನ ಇನ್ನೂ ಕಷ್ಟ ಪಟ್ಟು ಏಳು ಮರಗಳನ್ನು ಕಡಿದನು.
ಹೀಗೇ ದಿನಗಳು ಉರುಳಿದಂತೆ ಅವನು ತರುತ್ತಿದ್ದ ಮರಗಳ ಸಂಖ್ಯೆ ಕಡಿಮೆಯಾಗುತ್ತಿತ್ತು.
ಅವನು "ನನ್ನ ಶಕ್ತಿ ಕುಂದುತ್ತಿದೆಯೇ? " ಎಂದು ಆಲೋಚಿಸಿದನು.
ಅವನು ವ್ಯಾಪಾರಿಯ ಬಳಿ ಬಂದು "ಒಡೆಯ, ಕ್ಷಮಿಸಿ. ಯಾಕೆ ಈ ರೀತಿ ಆಗ್ತಿದೆ ಅಂತ ನನಗೇನೂ ಗೊತ್ತಾಗ್ತಿಲ್ಲ. " ಎಂದನು.
ವ್ಯಾಪಾರಿಯು "ನಿನ್ನ ಕೊಡಲಿಯನ್ನು ಯಾವಾಗ ಹರಿತಗೊಳಿಸಿದ್ದು?" ಎಂದಾಗ,
ಮರಕಡಿಯುವವನು "ಹರಿತಗೊಳಿಸುವುದೇ? ನನಗೆ ಸಮಯವೇ ಇರಲಿಲ್ಲ. ನಾನು ಮರಗಳನ್ನು ಕಡಿಯುವುದರಲ್ಲಿ ನಿರತನಾಗಿದ್ದೆ." ಎಂದ.
ಇದೇ ರೀತಿ ನಮ್ಮಲ್ಲಿ ಬಹುತೇಕ ಮಂದಿ ನಮ್ಮ ಕೌಶಲ್ಯಗಳನ್ನು ಅಪ್ಡೇಟ್ ಮಾಡೋದೇ ಇಲ್ಲ. ನಾವು ಏನು ಕಲೆತಿದ್ದೇವೋ ಅಷ್ಟೇ ಸಾಕು ಎಂದು ಭಾವಿಸಿತ್ತೇವೆ.
ಆದರೆ ಇಷ್ಟೇ ಸಾಕು ಎನ್ನುವುದಕ್ಕಿಂತ ಇನ್ನೂ ಕಲಿಯಬೇಕು ಎಂಬ ಮನೋಭಾವ ಬೆಳೆಸಿಕೊಂಡರೆ ಚೆನ್ನ ಅಲ್ಲವೇ?
ಆದ್ದರಿಂದ ಸಮಯಕ್ಕೆ ತಕ್ಕಂತೆ ನಮ್ಮ ಕೌಶಲ್ಯಗಳನ್ನು ಹರಿತಗೊಳಿಸುತ್ತಿರಬೇಕು. ಅಲ್ವೇ?