Tuesday, January 13, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೨

೨. ಶ್ರೀಶೈಲದ ಮಲ್ಲಿಕಾರ್ಜುನ.

ಮಲ್ಲಿಕಾರ್ಜುನ ದೇವಾಲಯ

ಎಲ್ಲಿದೆ?
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ.
ಕೃಷ್ಣ ನದಿ ತೀರದಲ್ಲಿರುವ ಇದು ಕದಲಿ, ಬಿಲ್ವವೃಕ್ಷಗಳಿಂದ ಕೂಡಿದ ಮನೋಹರವಾದ ಪರ್ವತಶ್ರೇಣಿಯಲ್ಲಿದೆ.
ಪುರಾಣ ಕಾಲದಲ್ಲಿ ಶಿವ-ಪಾರ್ವತಿಯರು ತಮ್ಮ ಮಗನಾದ ಕುಮಾರಸ್ವಾಮಿಯನ್ನು ಅರಸುತ್ತಾ ಇಲ್ಲಿಗೆ ಬಂದರು ಎಂದು ಪ್ರತೀತಿ.
ಒಂದು ಐತಿಹ್ಯದಂತೆ ಶಿವನ ಮಕ್ಕಳು ಕೈಲಾಸ ಪರ್ವತವನ್ನು ತೊರೆದು ಶ್ರೀಶೈಲದಲ್ಲಿ ವಿಹರಿಸುತ್ತಿರಲು, ಬಹುದಿನಗಳ ನಂತರ ಮಕ್ಕಳನ್ನು ನೋಡುವಾಸೆಯಿಂದ ಕೈಲಾಸಪತಿಯು ಪತ್ನಿ ಸಮೇತ ಇಲ್ಲೇ ಬಂದು ನೆಲೆನಿಂತನು.
ಆದಿ ದಂಪತಿಗಳ ಸೇವೆಗಾಗಿ ಇಂದ್ರಾದಿಗಳು ಶ್ರೀಶೈಲಕ್ಕೆ ಬಂದರು. ಕೆಲಕಾಲದ ನಂತರ ಶಿವನು ತನ್ನ ಪರಿವಾರದೊಡನೆ ಮೂಲಸ್ಥಾನಕ್ಕೆ ಹೊರಡಲನುವಾದಾಗ ಸ್ವಾಮಿಯು ಇಲ್ಲೇ ನೆಲೆಸಬೇಕೆಂದು ಭಕ್ತರು ಕೋರಿದರು.
ಶಿವ-ಪಾರ್ವತಿಯರು ಮಲ್ಲಿಕಾರ್ಜುನ-ಭ್ರಮರಾಂಬೆಯ ರೂಪದಲ್ಲಿ ಇಲ್ಲಿ ಜ್ಯೋತಿರ್ಮಯರಾಗಿ ನಿಂತರಂತೆ. ಈಗಲೂ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಶಿವ-ಪಾರ್ವತಿಯರು ಇಲ್ಲಿಗೆ ಭೇಟಿ ನೀಡುತ್ತಾರೆಂಬುದು ಸ್ಥಳೀಯರ ನಂಬಿಕೆ.
ಪ್ರಖ್ಯಾತ ವಚನಕಾರ್ತಿ ಅಕ್ಕಮಹಾದೇವಿ ಇಲ್ಲಿಯೇ ಮಲ್ಲಿಕಾರ್ಜುನನ ದರ್ಶನ ಪಡೆದು ಅಂತರ್ಧಾನರಾದರೆಂದೂ ನಂಬಿಕೆ.
ಛತ್ರಪತಿ ಶಿವಾಜಿ ಈ ದೇವಾಲಯಕ್ಕೆ ಆರಂಭಿಕ ರೂಪ ನೀಡಿದನಂತೆ.
ವಿಜಯನಗರ ಅರಸರ ಕಾಲದಲ್ಲಿ ಈ ದೇವಸ್ಥಾನ ಸಾಕಷ್ಟು ಅಭಿವೃದ್ಧಿ ಹೊಂದಿತು.

ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯ.

ದೇವಸ್ಥಾನದ ಸ್ವರೂಪ.

ಮಲ್ಲಿಕಾರ್ಜುನನ ದೇವಸ್ಥಾನವು ೧೫೭೨ ಅಡಿಗಳಷ್ಟು ಎತ್ತರದ ಬೆಟ್ಟದ ಮೇಲಿದೆ.
ದೇಗುಲದ ವಿಸ್ತೀರಣ ೩೦೦೦೦೦ ಚ. ಅಡಿ. ಸಂಪೂರ್ಣ ಶಿಲಾನಿರ್ಮಿತವಾದ ಈ ದೇವಸ್ಥಾನದ ಮುಖಮಂಟಪ ಮತ್ತು ನಂದಿ ವಿಗ್ರಹಗಳು ಅತಿ ಸುಂದರವಾಗಿವೆ.
ಇಲ್ಲಿನ ದೇವಿ ಭ್ರಮರಾಂಬಾಳನ್ನು ಮಾಧವಿ ಎಂದೂ ಕರೆಯುತ್ತಾರೆ. ಇದನ್ನು ಶಕ್ತಿಸ್ಥಳವೆಂದೂ ಕರೆಯಲಾಗುತ್ತದೆ.

ಪಾತಾಳ ಗಂಗಾ (ಕೃಷ್ಣಾ ನದಿ ದಡದಲ್ಲಿರುವ ಕ್ಷೇತ್ರ) ಇಂದ ತೀರ್ಥವನ್ನು ಒಯ್ದು ೮೫೨ ಮೆಟ್ಟಿಲುಗಳನ್ನು ಹತ್ತಿ ಭಕ್ತಾದಿಗಳು ಅಭಿಷೇಕ ಮಾಡುತ್ತಾರೆ. ಹತ್ತಿರದಲ್ಲಿರುವ ಸಾಕ್ಷಿ ಗಣಪತಿ (೨೨ ಕಿ. ಮೀ.) ಪ್ರಮುಖ ಕ್ಷೇತ್ರ.

ಭೇಟಿ ನೀಡುವ ಸಮಯ.

ಶಿವರಾತ್ರಿಗೆ ಮುನ್ನ ಮಘಮಾಸ ಕಳೆದ ನಂತರ ಈ ಯಾತ್ರೆ ಕೈಗೊಳ್ಳಬೇಕು.
ಮಹಾಶಿವರಾತ್ರಿ, ಮಕರ ಸಂಕ್ರಾಂತಿ, ಚಾಂದ್ರಮಾನ ಯುಗಾದಿಗಳು ಇಲ್ಲಿ ಪ್ರಮುಖ ಉತ್ಸವದ ದಿನಗಳು.
ಇದಲ್ಲದೇ ಪ್ರತೀ ಪಕ್ಷದ ಚತುರ್ದಶಿಯ ಪ್ರದೋಷಕಾಲಕ್ಕೆ ಇಲ್ಲಿ ವಿಶೇಷ ಪೂಜೆ ಇರುತ್ತದೆ.

ಹೇಗೆ ಹೋಗುವುದು?
ಶ್ರೀಶೈಲಯಾತ್ರೆ ಅತ್ಯಂತ ಕಠಿಣವಾದದ್ದು.
ಆತ್ಮಕೂರಿನಿಂದ ದ್ರೋಣಾಚಲಂ ಮಾರ್ಗದ ೭೫ ಕಿ.ಮೀ. ಬರಿಗಾಲಿನಲ್ಲಿ ಕ್ರಮಿಸುವುದು ಶ್ರೀಶೈಲ ಯಾತ್ರೆ.
ಇದು ಶಿವ ಭಕ್ತರಿಗೆ ಪವಿತ್ರವಾದದ್ದು.

ವಸತಿ.
ಕರ್ನಾಟಕ ಭವನ, ಶಂಕರಮಠದ ಅತಿಥಿ ಗೃಹಗಳಿವೆ.
ಆಂಧ್ರ ಪ್ರದೇಶ ಸರ್ಕಾರದ ಶೈಲಾ ವಿಹಾರ ಅತಿಥಿ ಗೃಹಗಳಿವೆ.
ಇದಲ್ಲದೇ ಖಾಸಗಿ ಅತಿಥಿ ಗೃಹಗಳೂ ಇವೆ.

--------------------------------------------
ಚಿತ್ರ ಕೃಪೆ: apsrtc.gov.in ಮತ್ತು shaivam.org