My Blog List

Wednesday, April 29, 2009

ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ.

ರವಿ.

ಈ ಚಿತ್ರವನ್ನು ಸೆರೆಹಿಡಿದದ್ದು ಬಂಡಿಪುರದ ಬಳಿ.

ಈ ಚಿತ್ರಕ್ಕೆ ಹೊಂದುವಂತಹ ಕವನ/ ಕತೆ(ಥೆ)/ ಚುಟುಕ ಏನಾದರೂ ಬರೆಯಿರಿ.


Thursday, April 23, 2009

ಪ್ಯಾನಿಂಗ್ - ನನ್ನ ಪ್ರಯತ್ನ

ಪಾಲಚಂದ್ರ ಬರೆದ ಪ್ಯಾನಿಂಗ್ ಮಾಹಿತಿ ಉಪಯುಕ್ತವಾಗಿತ್ತು.

ಅದನ್ನು ಪ್ರಯತ್ನಿಸಲು ಇಂದು ಅವಕಾಶ ಸಿಕ್ಕಿತು.

ಪ್ಯಾನಿಂಗ್ ಮಾಹಿತಿಯನ್ನು ಓದಿ ಪ್ರಾಕ್ಟಿಕಲ್ ಆಗಿ ಪ್ರಯತ್ನ ಪಟ್ಟಿರುವೆ.

ಪ್ಯಾನಿಂಗ್ ೧

ಮೇಲಿನ ಚಿತ್ರ ಸೆರೆಹಿಡಿದದ್ದು ಮ್ಯಾನುಅಲ್ ಮೋಡ್ ಅಲ್ಲಿ

ISO 80

Exposure 1/200

F 8.0

ಪ್ಯಾನಿಂಗ್ ೨

ಇದನ್ನು ಕೂಡ ಮ್ಯಾನುಅಲ್ ಮೋಡ್ ಬಳಸಿ ಸೆರೆಹಿಡಿದಿದ್ದೇನೆ.

ISO 80

Exposure 1/100

F 8.0

Tuesday, April 21, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೧೨ [ದಾರುಕಾವನದ ನಾಗನಾಥ].

ದಾರುಕಾವನದ ನಾಗನಾಥ


ಎಲ್ಲಿದೆ?
ಇದು ಮಹಾರಾಷ್ಟ್ರದ ಪರಭಣಿ ಜಿಲ್ಲಿಯಲ್ಲಿದೆ. ದಾರುಕಾವನಕ್ಕೆ ಈಗ ಔಂದ್ ಎಂಬ ಹೆಸರಿದೆ.

ದೇವಸ್ಥಾನದ ಸ್ವರೂಪ.
ದಾರುಕಾವನದ ನಾಗೇಶ ಅಥವಾ ನಾಗನಾಥ ದೇವಾಲಯವು ಅಪರೂಪದ ವಾಸ್ತುಶಿಲ್ಪವಾಗಿದೆ. ಸಂಪೂರ್ಣ ಶಿಲಿಯಲ್ಲೇ ನಿರ್ಮಾಣವಾಗಿರುವ ಈ ದೇವಸ್ಥಾನಕ್ಕೆ ಬೃಹದಾಕಾರದ ಬಾಗಿಲುಗಳು, ವಿಶಾಲವಾದ ಸಭಾಂಗಣವೂ ಇದೆ. ಎಂಟು ಶಿಲ ಕಂಬಗಳ ಆಧಾರದ ಮೇಲೆ ಇಡೀ ದೇವಾಲಯ ನಿಲ್ಲುವಂತೆ ರೂಪಿಸಲಾಗಿದೆ. ನಾಗನಾಥ ಲಿಂಗವು ಒಳಭಾಗದ ಚಿಕ್ಕ ಗರ್ಭಗುಡಿಯಲ್ಲಿದೆ. ಈ ದೇವಸ್ಥಾನದ ವಿಶೇಷವೆಂದರೆ ಇಲ್ಲಿ ಶಿವಲಿಂದ ಎದುರು ನಂದಿಯ ವಿಗ್ರಹವಿಲ್ಲ. ದೇವಸ್ಥಾನದ ಹಿಂಭಾಗದಲ್ಲಿ ನಂದಿಕೇಷ್ವರನ ಪ್ರತ್ಯೇಕ ದೇವಾಲಯವಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ೧೨ ಜ್ಯೊತಿರ್ಲಿಂಗ ದೇವಸ್ಥಾನಗಳಿವೆ. ಸುಂದರವಾದ ಗಣಪತಿ, ದತ್ತಾತ್ರೇಯ, ಮುರಳಿ ಮನೋಹರ, ದಶಾವತಾರ ದೇವಾಲಯಗಳಿವೆ. ಔಂದ್ ಅಲ್ಲಿ ೧೦೮ ಶಿವ ದೇವಸ್ಥಾನಗಳು ಮತ್ತು ೬೮ ಇತರ ದೇವಾಲಯಗಳು ಇವೆ. ಹಾಗಾಗಿ ಔಂದ್ ದೇವಾಲಯಗಳ ನಗರಿ. ನಾಗನಾಥ ದೇವಸ್ಥಾನಕ್ಕೆ ಎರಡು ಕಳಸ ಗೋಪುರಗಳು ಇವೆ. ಇದನ್ನು ಅತ್ತೆ-ಸೊಸೆ ಕಳಸ ಗೋಪುರ ಎಂದು ಕರೆಯಲಾಗುತ್ತದೆ.

ಸ್ಥಳ ಪುರಾಣ.
ದಕ್ಷಬ್ರಹ್ಮ ತಾನು ನಡೆಸಿದ ಮಹಾಯಾಗಕ್ಕೆ ಶಿವನನ್ನು ಕರೆಯಲಿಲ್ಲ. ಪಾರ್ವತಿ ಅಪಮಾನದಿಂದ ಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಂಡಾಗ ಶಿವ ಬೇಸತ್ತು ಅಲೆಯುತ್ತಾ ಅಮರದತ್ ಸರೋವರದ ಬಳಿ ತಪಸ್ಸು ಮಾಡಿದನೆಂಬುದು ನಂಬಿಕೆ. ಮುಂದೆ ಪಾಂಡವರು ವನವಾಸದಲ್ಲಿ ಇಲ್ಲಿಗೆ ಬಂದಾಗ, ಹಸುಗಳು ತಾವಾಗಿಯೇ ಈ ಸ್ಥಳದಲ್ಲಿ ಹಾಲು ಸುರಿಸುವುದನ್ನು ಕಂದು, ಇದರ ಇತಿಹಾಸ ತಿಳಿದು ಶಿವಲಿಂಗ ಸ್ಥಾಪಿಸಿದರಂತೆ. ಇನ್ನೊಂದು ಕತೆ(ಥೆ)ಯಂತೆ ಇಲ್ಲಿ ದಾರುಕಾಸುರನೆಂಬ ಅಸುರನಿದ್ದ. ಅವನು ಪಾರ್ವತಿಯಿಂದ ವರಪಡೆದು ಅಜೇಯನಾಗಿ ಮೆರೆಯುತ್ತಿದ್ದ. ಶಿವನು ಕೊನೆಗೆ ತನ್ನ ಭಕ್ತನಾದ ಸುಪ್ರಿಯನೆಂಬ ಅರಸನ ಮೂಲಕ ದಾರುಕಾಸುರನ ಉಪಟಳವನ್ನು ಕೊನೆಗೊಳಿಸೆ ಇಲ್ಲಿ ನೆಲೆ ನಿಂತನು. ಹಾಗಾಗಿ ಈ ಕ್ಷೇತ್ರಕ್ಕೆ ದಾರುಕಾವನ ಎಂಬ ಹೆಸರು ಬಂದಿದೆ ಎಂದು ನಂಬಿಕೆ. ನಾಗನಾಥ ದೇವಸ್ಥಾನದ ಹೊರಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಇದಕ್ಕೊಂದು ಕತೆ(ಥೆ)ಯಿದೆ. ಔರಂಗಜೇಬ್ ಈ ದೇವಾಲಯವನ್ನು ನಾಶ ಮಾಡುವ ಸಲುವಾಗಿ ದಾಳಿ ಮಾಡಿ ಪಾರ್ವತಿ ವಿಗ್ರಹ ಕಿತ್ತು ಎಸೆದಾಗ ಸಾವಿರಾರು ಹಾವುಗಳು ಅವನ ಸೈನ್ಯದ ಮೇಲೆ ದಾಳಿ ಮಾಡಿದವೆಂದೂ, ಅವರು ಪಲಾಯನ ಮಾಡಿದ ನಂತರ ಭಕ್ತಾದಿಗಳು ಅಲ್ಲೇ ಪಾರ್ವತಿ ದೇವಾಲಯ ನಿರ್ಮಿಸಿದರೆಂದೂ ನಂಬಿಕೆಯಿದೆ. ಇಂದಿಗೂ ಹಾವುಗಳು ಇಲ್ಲಿ ನಿರ್ಭಯವಾಗಿ ಸಂಚರಿಸುತ್ತವೆ. ನಾಗಪಂಚಮಿಯಂದು ಜೀವಂತ ಹಾವುಗಳಿಗೆ ತನಿ ಎರೆಯುವ ಪದ್ಧತಿ ಇಲ್ಲಿದೆ.

ಭೇಟಿ ನೀಡುವ ಸಮಯ.
ಪ್ರತಿ ೧೨ ವರ್ಷಗಳಿಗೊಮ್ಮೆ ಕಪಿಲಷಷ್ಠಿ ಮುಹೂರ್ತದಲ್ಲಿ ಕಾಶಿಯಿಂದಲೇ ಇಲ್ಲಿಗೆ ಗಂಗೆಯನ್ನು ತಂದು ಅಭಿಷೇಕ ನೆರವೇರಿಸಲಾಗುತ್ತದೆ. ಶಿವರಾತ್ರಿ, ಯುಗಾದಿಗಳಂದು ವಿಶೇಷ ಪೂಜೆ ನೆರವೇರುತ್ತದೆ.

ಸೇರುವ ಬಗೆ.
ಹತ್ತಿರದ ರೈಲು ನಿಲ್ದಾಣ ಪರಭಣಿ. ಪರಭಣಿಗೆ ಔರಂಗಾಬಾದ್ ಇಂದ ಸಾಕಷ್ಟು ರೈಲು ಸೌಕರ್ಯಗಳಿವೆ.
ನಂದೇಡ್ ಇಂದ (೬೦ ಕಿ. ಮೀ. ದೂರ), ಔರಂಗಾಬಾದ್ ಇಂದ (೨೧೮ ಕಿ. ಮೀ. ದೂರ) ಸಾಕಷ್ಟು ಬಸ್ ಸೌಕರ್ಯಗಳಿವೆ.

ವಸತಿ.
ಔಂದ್ ಅಲ್ಲಿ ದೇಗುಲದ ಯಾತ್ರಿ ನಿವಾಸ ಮಾತ್ರ ತಂಗಲು ಇರುವ ತಾಣ. ಆದರೆ ಪರಭಣಿ ಇಂದ ಸಾಕಷ್ಟು ವಾಹನ ವ್ಯವಸ್ಥೆ ಇರುವುದರಿಂದ ಅಲ್ಲಿಯೇ ತಂಗುವುದು ಉತ್ತಮ.

----------------------------------------------
ಚಿತ್ರ ಕೃಪೆ: ಇಲ್ಲಿಂದ ಪಡೆದದ್ದು

Thursday, April 16, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೧೧ [ವೆರುಳಿನ ಘುಶ್ಮೇಶ್ವರ].

ವೆರುಳಿನ ಘುಶ್ಮೇಶ್ವರ.

ವೆರುಳಿನ ಘುಶ್ಮೇಶ್ವರ.

ಎಲ್ಲಿದೆ?
ಔರಂಗಾಬಾದ್ ಇಂದ ಎಲ್ಲೋರ ಗುಹೆಗಳ ಕಡೆ ಹೋಗುವ ರಸ್ತೆಯಲ್ಲಿ ವೆರುಳ್ ಸಿಗುತ್ತದೆ. ಜ್ಯೋತಿರ್ಲಿಂಗ ಗ್ರೀಷ್ಮೇಶ್ವರ ಅಥವಾ ಘುಶ್ಮೇಶ್ವರ ಇಲ್ಲಿದೆ. ಇದು ಮೂಲತಃ ನಾಗ್ ಬುಡಕಟ್ಟು ಜನಾಂಗದವರ ದೇವಸ್ಥಾನ.

ದೇವಸ್ಥಾನದ ಸ್ವರೂಪ.
ದಶಾವತಾರದ ಕೆತ್ತನೆಗಳಿಂದ ಶೋಭಿತವಾದ ಇದು ೨೪೦ * ೧೮೫ ಅಡಿ ವಿಸ್ತಾರವಾಗಿದೆ. ಅಂಗಳದಲ್ಲಿ ೨೪ ಕಂಬಗಳ ಮೇಲೂ ನಂದಿಕೇಶ್ವರನ ಮೂರ್ತಿ ಇದೆ. ದೇವರು ಪೂರ್ವಾಭಿಮುಖವಾಗಿದ್ದು ದೇವಾಲಯದಿಂದ ಪವಿತ್ರ ಜಲ ಪ್ರವಹಿಸುವುದು.

ಸ್ಥಳ ಪುರಾಣ.
ಈ ಸ್ಥಳದ ಕುರಿತು ಅನೇಕ ಕತೆ(ಥೆ)ಗಳಿವೆ. ಪಾರ್ವತಿ ಕುಂಕುಮ ಇಟ್ಟುಕೊಳ್ಳುವಾಗ ಅದು ಶಿವಲಿಂಗವಾಗಿ ಕೆಳಗೆ ಬಿದ್ದಿತಂತೆ. ಇದಕ್ಕೆ ಕುಂಕುಮೇಶ್ವರ ಎಂಬ ಹೆಸರು ಕೂಡ ಇದೆ. ಇನ್ನೊಂದು ಕತೆ(ಥೆ)ಯಂತೆ, ದೇವಗಿರಿ ಪರ್ವತದಲ್ಲಿ ಸುಧರ್ಮ-ಸುದೇಹಿ ದಂಪತಿಗಳು ಧರ್ಮಪರರಾಗಿದ್ದರು. ಇವರಿಗೆ ಮಕ್ಕಳಾಗದಿರಲು ತಂಗಿ ಘುಶ್ಮಾದೇವಿಗೆ ಮಗುವಾಯಿತು. ಅಕ್ಕ ಸುದೇಹಿ ಆ ಮಗುವನ್ನು ಮೋಸದಿಂದ ಕೊಂದಳು. ಆಗ ತಂಗಿಯು ಶಿವನನ್ನು ಪ್ರಾರ್ಥಿಸಿದಳು. ಶಿವನು ಮಗುವನ್ನು ಬದುಕಿಸಿದ ಮತ್ತು ಅವಳ ಕೋರಿಕೆಯ ಮೇರೆಗೆ ಘುಷ್ಮೇಶ್ವರನಾಗಿ ಇಲ್ಲಿ ನಿಂತನು ಎಂದು ನಂಬಿಕೆ. ಇದನ್ನು ವೆರುಳಿನ ಅರಸನಾದ ಭೋಂಸ್ಲೆ ಸ್ಥಾಪಿಸಿದನೆಂದೂ, ಅಹಲ್ಯಾಬಾಯಿ ಹೋಳ್ಕರ‍್ ಅಭಿವೃದ್ಧಿ ಪಡಿಸಿದಳೆಂದೂ ಚಾರಿತ್ರಿಕ ದಾಖಲೆಗಳು ಹೇಳುತ್ತವೆ.

ಭೇಟಿ ನೀಡುವ ಸಮಯ.
ಮಹಾಶಿವರಾತ್ರಿಯಂದು ವಿಶೇಷ ರಥೋತ್ಸವ ನೆರವೇರುತ್ತದೆ. ವರ್ಷದ ಎಲ್ಲಾ ದಿನಗಳಲ್ಲೂ ಪೂಜೆ ನೆರವೇರುತ್ತದೆ.

ಸೇರುವ ಬಗೆ.
ಔರಂಗಾಬಾದ್ ಅತಿ ಹತ್ತಿರವಿರುವ ರೈಲು ನಿಲ್ದಾಣ (೩೧ ಕಿ.ಮೀ). ದೌಲತಾಬಾದ್ ಇಂದ ಸಾಕಷ್ಟು ಬಸ್ಸುಗಳಿವೆ.

ವಸತಿ.
ದೇವಸ್ಹಾನದ ಅತಿಥಿಗೃಹ ಮಾತ್ರ ಉಳಿದುಕೊಳ್ಳಲು ಇರುವ ತಾಣ. ಔರಂಗಾಬಾದ್ ಅಲ್ಲಿ ಸಾಕಷ್ಟು ಸುಸಜ್ಜಿತ ಹೋಟೆಲ್ಗಳಿವೆ.

----------------------------------------------
ಚಿತ್ರ ಕೃಪೆ: ಇಲ್ಲಿಂದ ಪಡೆದದ್ದು

Wednesday, April 15, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೧೦ [ವಾರಣಾಸಿ (ಕಾಶಿ) ವಿಶ್ವೇಶ್ವರ].

ವಾರಣಾಸಿ (ಕಾಶಿ) ವಿಶ್ವೇಶ್ವರ.

ಕಾಶಿ ವಿಶ್ವನಾಥ.

ಎಲ್ಲಿದೆ?
ಕಾಶಿ ಅಥವಾ ವಾರಣಾಸಿಯು ಉತ್ತರಪ್ರದೇಶದಲ್ಲಿದೆ. ವಿಶ್ವನಾಥ ಮಂದಿರ ಇಲ್ಲಿನ ಪ್ರಧಾನ ದೇವಾಲಯ. ೧೭೭೬ರಲ್ಲಿ ಈ ದೇವಸ್ಥಾನವು ಪುನರ್ ನಿರ್ಮಾಣಗೊಂಡಿತು.

ದೇವಸ್ಥಾನದ ಸ್ವರೂಪ.
ಇಲ್ಲಿನ ಚೌಕಾಕಾರದ ಕುಂಡದಲ್ಲಿ ಲಿಂಗವು ಒಂದು ಅಡಿ ಎತ್ತರವಾಗಿದೆ. ಗಂಗಾಸ್ನಾನ ಮಾಡಿ, ಸ್ವತಃ ಭಕ್ತಾದಿಗಳೇ ಗಂಗಾಜಲದಿಂದ ಅಭಿಷೇಕ ಮಾಡಬಹುದು.

ಸ್ಥಳ ಪುರಾಣ.
ಈ ಕ್ಷೇತ್ರದ ಕುರಿತು ನೂರಾರು ಪುರಾಣ ಕತೆ(ಥೆ)ಗಳು ಕೇಳಿ ಬರುತ್ತವೆ. ಪ್ರಳಯಕಾಲದಲ್ಲಿ ಮಹಾವಿಷ್ಣು ಇಲ್ಲಿ ತಪಸ್ಸನ್ನು ಆಚರಿಸಿದನೆಂದೂ, ಬ್ರಹ್ಮನು ಆಗ ಈತನ ನಾಭಿ ಕಮಲದಿಂದ ಜನಿಸಿದಾಗ, ಲಕ್ಷ್ಮಿಯು ಆತನ ಕಣ್ಣುಮುಚ್ಚಲು ಜಗವೆಲ್ಲ ಕತ್ತಲಾಯಿತೆಂದೂ, ಆಗ ಭಕ್ತರ ಸ್ತೋತ್ರದಿಂದ ಸುಪ್ರೀತನಾದ ಶಿವನು ಜ್ಯೋತಿರ್ಲಿಂಗ ಸ್ವರೂಪನಾಗಿ ಇಲ್ಲಿ ನೆಲೆಸಿ ಜಗವನ್ನು ಬೆಳಗಿದನೆಂಬುದು ನಂಬಿಕೆ. ಸ್ವರ್ಗದಿಂದ ಧುಮುಕಿದ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಹಿಡಿದದ್ದುಉ ಇಲ್ಲೇ ಎಂಬ ನಂಬಿಕೆಯೂ ಇದೆ. ಕಾಶಿಯನ್ನು ೩ ಭಾಗ ಮಾಡಿಲಾಗಿವೆ. ಕೇದಾರ ಖಂಡ, ಪ್ರಣವ ಖಂಡ, ವಿಶ್ವೇಶ್ವರ ಖಂಡ ಎಂದು ಈ ಭಾಗಗಳಿಗೆ ಹೆಸರು. ಜ್ಯೋತಿರ್ಲಿಂಗ ವಿಶ್ವೇಶ್ವರ ಖಂಡದಲ್ಲಿ ಇದೆ.

ಭೇಟಿ ನೀಡುವ ಸಮಯ.
ಪ್ರತಿ ಸೋಮವಾರ ಇಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ವರ್ಷವಿಡೀ ಇಲ್ಲಿ ದರ್ಶನಕ್ಕೆ ಅವಕಾಶವಿದೆ.

ಸೇರುವ ಬಗೆ.
ಬೆಂಗಳೂರಿನಿಂದ ನೇರವಾಗಿ ಮೊಘಲ್ ಸರಾಯ್ ವರೆಗೆ ರೈಲು ಮಾರ್ಗವಿದೆ. ನಾಗಪುರ, ಅಲಹಾಬಾದ್ ಮೂಲಕವೂ ತಲುಪಬಹುದು.

ವಸತಿ.
ಶ್ರೀಕೃಷ್ಣ ಮಾಧ್ವ ಮಂದಿರ, ಮಾಧವಾಶ್ರಮ ಪ್ರಮುಖ ವಸತಿ ತಾಣಗಳು. ಇದಲ್ಲದೇ ಉತ್ತರಪ್ರದೇಶದ ಅಧಿಕೃತ ವಸತಿ ಗೃಹ ಸೇರಿದಂತೆ ಸಾಕಷ್ಟು ವಸತಿ ಗೃಹಗಳಿವೆ.

----------------------------------------------
ಚಿತ್ರ ಕೃಪೆ: ಸ್ನೇಹಿತ ನಾಗರಾಜ್

Monday, April 13, 2009

ನನ್ನ ಮುದ್ದಿನ ಸೊಸೆ.

ಈ ಮುದ್ದು ಪುಟಾಣಿಯ ಚಿತ್ರಗಳನ್ನು ಸೆರೆಹಿಡಿದದ್ದು ಕಳೆದ ತಿಂಗಳು ಅಜ್ಜಿಯ ಮನೆಗೆ ಹೋದಾಗ. ಅಜ್ಜಿಯ ಮನೆಗೆ ಬೆಳಿಗ್ಗೆ ಹೋದಾಗ ಮಲಗಿದ್ದಳು.

ಸ್ವಲ್ಪ ಸಮಯದ ನಂತರ ಹಸಿವಾದ ಕಾರಣ ಅಳುತ್ತಾ ಎದ್ದಳು.

ಅಮ್ಮಾ!

ನಂತರ ಹಾಲು ಕುಡಿದು ಸ್ವಲ್ಪ ಹೊತ್ತು ಅಲ್ಲಿ ಇಲ್ಲಿ ನೋಡುತ್ತಿದ್ದಳು. ಆಗ ಸೆರೆಹಿಡಿದ ಚಿತ್ರ ಇದು.

ಹಾಸಿಗೆಯ ಮೇಲೆ ಮಲಗಿ ಬೇಜಾರಾಯ್ತೇನೋ?
ಅಮ್ಮನ ಮಡಿಲಲ್ಲಿ ಕುಳಿತಳು.

ಯಾರಿದು? ನನ್ನನ್ನೇಕೆ ದುರುಗುಟ್ಟಿಕೊಂಡು ನೋಡುತ್ತಿದ್ದಾರೆ?

ನೀ ಹಿಂಗ ನೋಡಬ್ಯಾಡ ನನ್ನ. ನಾಚಿಕೆಯಾಗುವುದು.

ನನಗೆ ನಿದ್ದೆ ಬರ್ತಿದೆ. Disturb ಮಾಡ್ಬೇಡಿ. ಆಯ್ತಾ?

ಅಂದಹಾಗೆ, ಇವಳಿಗೆ ಈಗ ನಾಲ್ಕು ತಿಂಗಳು. ಇದೇ ತಿಂಗಳ ೨೩ರಂದು ಇವಳಿಗೆ "ನಾಮಕರಣ".

ಏನು ಹೆಸರಿಟ್ಟೆವು ಎಂದು ಆಮೇಲೆ ಹೇಳುವೆ.

Thursday, April 09, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೯ [ರಾಮೇಶ್ವರಂನ ರಾಮೇಶ್ವರ].

ರಾಮೇಶ್ವರಂನ ರಾಮೇಶ್ವರ.

ಎಲ್ಲಿದೆ?

ತಮಿಳುನಾಡಿನ ರಾಮೇಶ್ವರಂ ಅಲ್ಲಿದೆ. ಇದು ೪ ಕಿ. ಮೀ (೩೪ ಚ. ಮೈ) ಅಗಲದ ದ್ವೀಪ. ಇಲ್ಲಿನ ದೇವಸ್ಥಾನ ದ್ರಾವಿಡ ಶಿಲ್ಪ ಕಲೆಯ ಪ್ರತಿರೂಪ.

ದೇವಸ್ಥಾನದ ಸ್ವರೂಪ.
೮೬೫ ಅಡಿ ಉದ್ದ, ೬೫೭ ಅಡಿ ಅಗಲ ಮತ್ತು ೪೯ ಅಡಿ ಎತ್ತರವಾಗಿದೆ. ಸಹಸ್ರಾರು ಕಂಬಗಳು, ಹತ್ತು ಅಂತಸ್ತುಗಳ ಮಹಾದ್ವಾರ, ಹೀಗೆ ದೇಗುಲದ ನೋಟವೇ ಭವ್ಯವಾಗಿದೆ. ಇದರ ಗೋಪುರ ಕೂಡ ೧೨೬ ಅಡಿ ಎತ್ತರವಿದೆ. ಇಲ್ಲಿ ೨೪ ತೀರ್ಥಗಳಿವೆ. ರಾಮತೀರ್ಥ, ಸೀತಾಕುಂಡ, ಲಕ್ಷ್ಮಣ ತೀರ್ಥ, ಕಪಿಲತೀರ್ಥ, ಬ್ರಹ್ಮಕುಂಡ, ಮಂಗಳತೀರ್ಥ ಮುಂತಾದ ಹೆಸರಿನ ಇವುಗಳಲ್ಲಿ ಪ್ರತಿಯೊಂದಕ್ಕೂ ಕತೆಗಳಿವೆ. ಅವೆಲ್ಲವೂ ರೋಗನಿವಾರಕ ಎಂಬುದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ರಾಮೇಶ್ವರ ದೇವಸ್ಥಾನದ ಹತ್ತಿರದಲ್ಲೇ ಪಾರ್ವತಿ ದೇವಸ್ಥಾನವಿದೆ. ಅಲ್ಲದೇ, ಸಂತಾನ ಗಣಪತಿ, ವೀರಭದ್ರ, ಹನುಮಾನ್, ನವಗ್ರಹ ಮುಂತಾದ ದೇವಸ್ಥಾನಗಳಿವೆ.

ಸ್ಥಳ ಪುರಾಣ.
ಶ್ರೀರಾಮ, ರಾವಣನನ್ನು ಸಂಹರಿಸಿದ ನಂತರ ಆತನಿಗೆ ಕಣ್ಣು ಕಾಣದಂತಾಯಿತಂತೆ. ಇದು ಬ್ರಹ್ಮಹತ್ಯಾ ದೋಷದ ಪರಿಣಾಮ ಎಂದು ತಿಳಿದು ರಾಮೇಶ್ವರದಲ್ಲಿ ಲಿಂಗವನ್ನು ಅರ್ಚಿಸಿ ಪಾಪಮುಕ್ತನಾದನೆಂಬುದು ನಂಬಿಕೆ. ಹಾಗೆಯೇ, ಇದು ಶ್ರೀರಾಮನು ರಾವಣನ ಜೊತೆಗಿನ ಯುದ್ಧಕ್ಕೆ ಮೊದಲು ಶಿವನನ್ನು ಅರ್ಚಿಸಿದ ತಾಣ ಎಂಬ ನಂಬಿಕೆ ಕೂಡ ಇದೆ. ಪವಿತ್ರವಾದ ಕಾಶಿಯಾತ್ರೆ ಮಡುವವರು ಮೊದಲು ಇಲ್ಲಿ ದರ್ಶನ ಪಡೆದು, ಇಲ್ಲಿನ ಮರಳನ್ನು ಕಾಶಿಯ ಗಂಗೆಗೆ ಅರ್ಪಿಸಿ, ಕಾಶಿಯಾತ್ರೆ ಮುಗಿಸಿ ಬಂದು ರಾಮೇಶ್ವರನಿಗೆ ಗಂಗಾಸ್ನಾನ ಮಾಡಿಸಿದಾಗಲೇ ಕಾಶಿಯಾತ್ರೆ ಪೂರ್ಣವಾಗುವುದು ಎಂಬ ನಂಬಿಕೆ ಇದೆ.

ಭೇಟಿ ನೀಡುವ ಸಮಯ.
ಮಹಾಶಿವರಾತ್ರಿ ಮತ್ತು ಆಷಾಡ ಮಾಸದ ಎರಡೂ ಚತುರ್ದಶಿಗಳಂದು ಇಲ್ಲಿ ರಥೋತ್ಸವ ನೆರವೇರುತ್ತದೆ. ಪ್ರತಿನಿತ್ಯವೂ ಬೆಳಗಿನ ಜಾವ ೪ ಘಂಟೆಯಿಂದ ರಾತ್ರಿ ಹತ್ತು ಘಂಟೆಯವರೆಗೂ ನಿರಂತರವಾಗಿ ಇಲ್ಲಿ ವಿಶೇಷ ಪೂಜೆ ನಡೆಯುತ್ತಲೇ ಇರುತ್ತದೆ.

ಸೇರುವ ಬಗೆ.
ಬೆಂಗಳೂರಿನಿಂದ ರಾಮೇಶ್ವರಂಗೆ ನೇರವಾದ ರೈಲು ಸೊಲಭ್ಯವಿದೆ. ರಾಮೇಶ್ವರಂ ದಕ್ಷಿಣ ರೈಲ್ವೆಯ ಕಟ್ಟಕಡೆಯ ನಿಲ್ದಾಣ.
ಚೆನ್ನೈ ಇಂದ (೫೬೦ ಕಿ. ಮೀ.), ಮಧುರೈ ಇಂದ (೧೬೦ ಕಿ. ಮೀ.) ದೇವೀಪಟ್ಟಣದಿಂದ ಮಂಟಪಂ ವರೆಗೆ (೫೦ ಕಿ. ಮೀ.) ಹೇರಳವಾದ ಬಸ್ ಸೌಲಭ್ಯವಿದೆ.

ವಸತಿ.
ರಾಮೇಶ್ವರಂ ಟೂರಿಸ್ಟ್ ಆಫೀಸ್ ಮುಖ್ಯವಾದ ವಸತಿ ಕೇಂದ್ರ. ಉಡುಪಿ ಛತ್ರ, ರೈಲ್ವೇ ಹಾಲ್ಟಿಂಗ್ ರೂಂ, ಟಿ. ಟಿ. ಡಿ. ಸಿ. ಹೋಟೆಲ್, ತಮಿಳುನಾಡು ಸರ್ಕಾರದ ಅತಿಥಿಗೃಹ ಸೇರಿದಂತೆ ಉತ್ತಮ ವಸತಿ ಗೃಹಗಳಿವೆ.

--------------------------------------------
ಚಿತ್ರ ಕೃಪೆ: www.skyscrapercity.com

Wednesday, April 08, 2009

ಮಡಿಕೇರಿಯಲ್ಲಿ ಮೆರೆದಾಟ.

ಮಡಿಕೇರಿಯಲ್ಲಿ ಮೆರೆದಾಟ.

ಈ ಪ್ರವಾಸ ನಾವು ಕೈಗೊಂಡಿದ್ದು ಜನವರೀ ೨೪ ೨೦೦೯ರ ಶನಿವಾರದಂದು. ಈ ಪ್ರಯಾಣಕ್ಕೆ ಜೊತೆಯಾದವರು ನನ್ನ ಸಂಬಂಧಿ ರಾಘು, ಆತನ ಸೋದರಿಯರು (ಅವನ Cousins ಸೇರಿ) ಮತ್ತು ಗೆಳೆಯ ರಾಮ.

ಈ ಪ್ರವಾಸಕ್ಕೆ ಹೋಗುವುದೆಂದು ಖಾತ್ರಿಯಾದದ್ದು ಶುಕ್ರವಾರ, ಅಂದರೆ ಜನವರೀ ೨೩ ೨೦೦೯. ಸಂಜೆ ೬ಕ್ಕೆ ರಾಘು, ನನಗೆ ಮತ್ತು ರಾಮನಿಗೆ ಫೋನ್ ಮಾಡಿ ಮಡಿಕೇರಿಗೆ ಹೋಗೋಣವೆಂದು, ನಮ್ಮ ಜೊತೆಗೆ ಆತನ ಸೋದರಿಯರು ಬರುತ್ತಾರೆಂದು ಹೇಳಿದ. ಒಟ್ಟು ೭ ಮಂದಿ. ಎರಡು ಕಾರುಗಳಲ್ಲಿ ಹೋಗುವುದಾಗಿ ಹೇಳಿದ. ನನ್ನ ಮತ್ತು ರಾಘು ಕಾರಿನಲ್ಲಿ ಹೋಗುವುದಾಗಿ ನಿರ್ಧರಿಸಿದೆವು.
ಕೊನೆ ಘಳಿಗೆಯಲ್ಲಿ ಎಲ್ಲರೂ ಒಟ್ಟಿಗೆ ಒಂದೇ ವಾಹನದಲ್ಲಿ ಹೋಗುವ ನಿರ್ಧಾರವಾಯಿತು.

ಈಗ ನಮ್ಮಲ್ಲಿದ್ದ ಗೊಂದಲ ವಾಹನದ arrangement. ನಾಳೆ ಬೆಳಿಗ್ಗೆ ಹೋಗುವ ಪ್ರಯಾಣಕ್ಕೆ ಇಂದು ರಾತ್ರಿ ವಾಹನ ಬುಕ್ ಮಾಡಿದರೆ ಸಿಗುವುದೇ ಎಂಬ ಯೋಚನೆ ಇತ್ತು. ಗೊತ್ತಿದ್ದ ಎಲ್ಲಾ ಟ್ರ್ಯಾವೆಲ್ ಏಜೆಂಟರಿಗೆ ಫೋನ್ ಮಾಡಿದೆವು. ಯಾವ ವಾಹನವೂ ಸಿಗಲಿಲ್ಲ. ಯಾವುದೇ ವಾಹನ ಸಿಗದಿದ್ದಲ್ಲಿ ನಮ್ಮದೇ ಕಾರುಗಳಲ್ಲಿ ಹೋಗುವ ನಿರ್ಧಾರ ಮಾಡಿ, ಕೊನೆಯ ಪ್ರಯತ್ನ ಅಂತ ಇನ್ನೊಬ್ಬ ಟ್ರ್ಯಾವೆಲ್ ಏಜೆಂಟ್ಗೆ ಫೋನ್ ಮಾಡಿದ ರಾಘು. ಟಾಟಾ ಸುಮೋ ಇದೆ ಅಂತ ಹೇಳಿದ ಏಜೆಂಟ್. ಅಬ್ಬಾ ಸದ್ಯ ವಾಹನ ಸಿಕ್ತಲ್ಲಾ ಅಂತ ಟಾಟಾ ಸುಮೋವನ್ನು ಬುಕ್ ಮಾಡಿದ ರಾಘು. ಆಗ ಸಮಯ ರಾತ್ರಿ ೧೨ಘಂಟೆ.

ರಾಘು ನನಗೆ ಮತ್ತು ರಾಮನಿಗೆ ಫೋನ್ ಮಾಡಿ ಟಾಟಾ ಸುಮೋ ಬುಕ್ ಮಾಡಿದ್ದೇನೆ. ಬೆಳಿಗ್ಗೆ ಆರಕ್ಕೆ ನಮ್ಮ ಮನೆಗೆ ಬರುತ್ತದೆ ಅಂತ ಹೇಳಿ ಫೋನ್ ಡಿಸ್ಕನೆಕ್ಟ್ ಮಾಡಿದ.

ಬೆಳಿಗ್ಗೆ ಆರಕ್ಕೆ ರಾಘು ಮನೆಗೆ ಟಾಟಾ ಸುಮೋ ಓಡಿಸಿಕೊಂಡು ಡ್ರೈವರ್ ಮಂಜುನಾಥ್ ಬಂದನು. ಅಲ್ಲಿಂದ ರಾಘು ಮತ್ತು ಅವನ ಸೋದರಿಯರು ನಮ್ಮ ಮನೆಗೆ ಬಂದರು. ಅಲ್ಲಿಂದ ರಾಮನನ್ನು ಕರೆದುಕೊಂಡು ಮಡಿಕೇರಿಯ ಕಡೆಗೆ ಪ್ರಯಾಣ ಬೆಳೆಸಿದೆವು. ಮಧ್ಯಾಹ್ನ ದುಬಾರೆ ಆನೆ ಶಿಬಿರಕ್ಕೆ ತಲುಪಿದೆವು.










ಅಲ್ಲಿ ಊಟವನ್ನು ಮುಗಿಸಿ ಆನೆ ಶಿಬಿರಕ್ಕೆ ಮೋಟಾರ‍್ ದೋಣಿಯಲ್ಲಿ ಹೋದೆವು.



ಅಲ್ಲಿ ಕಂಡ ಕೆಲವು ದೃಶ್ಯಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದೆನು.

ನಂತರ ಮಡಿಕೇರಿಯನ್ನು ತಲುಪುವ ಹೊತ್ತಿಗೆ ಸಂಜೆಯಾಗಿತ್ತು.

ರಾಜಾಸೀಟಿನಲ್ಲಿ ಶನಿವಾರವಾಗಿದ್ದರಿಂದ ಜನಜಂಗುಳಿ.

ಅಲ್ಲೇ ಸೂರ್ಯಾಸ್ತದವರೆಗೂ ಕಾದು ಸೂರ್ಯಾಸ್ತದ ಕೆಲವು ಚಿತ್ರಗಳನ್ನು ಸೆರೆಹಿಡಿದೆನು.

ನಂತರ ಮಡಿಕೇರಿಯಿಂದ ತಲಕಾವೇರಿಯ ಮಾರ್ಗದಲ್ಲಿರುವ "ರತಿ ಹೋಂ ಸ್ಟೇ"ಯಲ್ಲಿ ತಂಗಿದ್ದೆವು.

ಈ ಹೋಂ ಸ್ಟೇಯನ್ನು ಇನ್ನೊಬ್ಬ ಸ್ನೇಹಿತನ ಮೂಲಕ ಮುಂಗಡವಾಗಿ ಕಾದಿರಿಸಿದೆವು. ಬುಕಿಂಗ್ ಮಾಡಿಸಿದಾಗ ರಾತ್ರಿ ಹನ್ನೊಂದು ಘಂಟೆ (ಜನವರೀ ೨೩ ೨೦೦೯). ರಾತ್ರಿ ಹೋಂ ಸ್ಟೇಯಲ್ಲೇ ಭರ್ಜರಿ ಭೋಜನ. ಒಳ್ಳೇ ನಿದ್ದೆ.

ಮಾರನೇ ದಿನ ಬೆಳಿಗ್ಗೆ ಎದ್ದು ತಲಕಾವೇರಿಯ ಕಡೆಗೆ ಹೊರಟೆವು.

ವಾಹನದಲ್ಲಿ ಅಂತ್ಯಾಕ್ಷರಿ ಆಟ. ಎಲ್ಲರೂ ಭಾಗವಹಿಸಿದೆವು. ತಲಕಾವೇರಿಯಲ್ಲಿ ಕಾವೇರಿಯ ಉಗಮ ಸ್ಥಾನವನ್ನು ನೋಡಿ ಅಲ್ಲಿನ view pointಗೆ ಹೋದೆವು.

ಅಲ್ಲಿ ಕಂಡ ಕೆಲವು ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಮಡಿಕೇರಿಯ ಕಡೆಗೆ ಪ್ರಯಾಣ ಬೆಳೆಸಿದೆವು.

ಮಡಿಕೇರಿಯಲ್ಲಿ ಓಂಕಾರೇಶ್ವರ ದೇವಸ್ಥಾನಕ್ಕೆ ಹೋದಾಗ ಸಮಯ ೧೨ ಆಗಿತ್ತು.

ಓಂಕಾರೇಶ್ವರನಿಗೆ ಮಾಡುತ್ತಿದ್ದ ಮಹಾಮಂಗಳಾರತಿಯನ್ನು ವೀಕ್ಷಿಸಿ ಅಲ್ಲಿಂದ ಅಬ್ಬಿ ಜಲಪಾತದ ಕಡೆಗೆ ಹೊರಟೆವು.

ಭಾನುವಾರವಾದ್ದರಿಂದ ಸಿಕ್ಕಾಪಟ್ಟೆ ಜನ. ಅಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು ಬೆಂಗಳೂರಿನ ಕಡೆಗೆ ಹೊರಟೆವು.

ಮಾರ್ಗ ಮಧ್ಯದಲ್ಲಿ ಊಟ ಮಾಡಿ ಮೈಸೂರು ತಲುಪುವ ಹೊತ್ತಿಗೆ ಸಂಜೆ ೬ ಆಗಿತ್ತು. ಮೈಸೂರಿನಲ್ಲಿ ತಿಂಡಿ ತಿಂದು ಬೆಂಗಳೂರಿನ ಕಡೆಗೆ ಹೊರಟೆವು.

ಹನ್ನೆರಡು ಜ್ಯೋತಿರ್ಲಿಂಗಗಳು - ೮ [ನಾಶಿಕದ ತ್ರ್ಯಂಬಕೇಶ್ವರ].

ನಾಶಿಕದ ತ್ರ್ಯಂಬಕೇಶ್ವರ.

ನಾಷಿಕದ ತ್ರ್ಯಂಬಕೇಶ್ವರ.
ಎಲ್ಲಿದೆ?
ಮಹಾರಾಷ್ಟ್ರದ ನಾಶಿಕದಲ್ಲಿದೆ. ಇದು ಗೋದಾವರಿ ನದಿಯ ಉಗಮ ಸ್ಥಾನ. ತ್ರ್ಯಂಬಕೇಶ್ವರದ ವಿಶೇಷವೆಂದರೆ ಒಂದೇ ಪಾಣಿಪೀಠದ ಕುಳಿಯೊಳಗೆ ಬ್ರಹ್ಮ - ವಿಷ್ಣು - ಮಹೇಶ್ವರರು ಮೂವರು ಕೂಡಿದ ಲಿಂಗ.

ದೇವಸ್ಥಾನದ ಸ್ವರೂಪ.
ಇದು ಭವ್ಯವಾದ ದೇಗುಲ. ಎತ್ತರದ ಕಂಬಗಳು ದೇವಾಲಯಕ್ಕೆ ಮೆರುಗು ನೀಡಿದೆ. ದೇವಾಲಯದ ಆವರಣದಲ್ಲಿ ಅಮೃತಕುಂಡ ಸರೋವರವಿದೆ. ದೇವಾಲಯದ ಸ್ವಲ್ಪ ದೂರದಲ್ಲೇ ಕುಶಾವರ್ತಿ ಎಂಬ ಪುಷ್ಕರಣಿ ಇದೆ. ದೇವಾಲಯವಿರುವ ಬ್ರಹ್ಮಗಿರಿ ಪರ್ವತದ ಬುಡದಲ್ಲಿ ವರಾಹ ತೀರ್ಥ ಮತ್ತು ನರಸಿಂಹ ತೀರ್ಥಗಳೆಂಬ ಪವಿತ್ರ ಕ್ಷೇತ್ರಗಳಿವೆ.

ಸ್ಥಳ ಪುರಾಣ.
ಬ್ರಹ್ಮಗಿರಿ ಪರ್ವತದ ತಪ್ಪಲಿನಲ್ಲಿ ಮಳೆಯಾಗದ್ದರಿಂದ ಗೌತಮ ಋಷಿಯು ದೀರ್ಘ ತಪಸ್ಸು ನಡೆಸಿದ. ಅವನ ತಪಸ್ಸಿಗೆ ಒಲಿದ ವರುಣನು ಶಾಶ್ವತವಾಗಿ ಹರಿಯುವ ಜಲಧಾರೆಯನ್ನು ಕರುಣಿಸಿದ. ಇದೇ ಗೋದಾವರೀ ನದಿ ಆಯಿತು. ಗೌತಮನ ಕೀರ್ತಿಗೆ ಅಸೂಯೆಗೊಂಡ ಋಷಿಗಳು ಅವನ ಮೇಲೆ ಹಸುವನ್ನು ಕೊಂದ ಆಪಾದನೆಯನ್ನು ಹೊರಿಸಿ ಬಹಿಷ್ಕರಿಸಿದರು. ಇದರಿಂದ ನೊಂದ ಗೌತಮನು ತನ್ನ ಸತಿಯೊಂದಿಗೆ ತಪಸ್ಸನ್ನಾಚರಿಸಿ ಶಿವನನ್ನು ಒಲಿಸಿಕೊಂಡಾಗ ಅವನು ಜ್ಯೋತಿರ್ಲಿಂಗ ರೂಪಧಾರಿಯಾಗಿ ಪ್ರತ್ಯಕ್ಷನಾಗಿ ತ್ರ್ಯಂಬಕೇಶ್ವರನಾಗಿ ಇಲ್ಲಿ ನೆಲೆಸಿದನೆಂದು ಪುರಾಣ ಹೇಳುತ್ತದೆ.

ಭೇಟಿ ನೀಡುವ ಸಮಯ.
ಮಾಘ ಶುದ್ಧ ದಶಮಿಯಂದು ಇಲ್ಲಿ ವಿಶೇಷ ರಥೋತ್ಸವ ನೆರವೇರುತ್ತದೆ. ಗುರು ಉಚ್ಚನಾಗಿರುವಾಗ ಸಿಂಹ ಮಾಸದ ಹುಣ್ಣಿಮೆಯಂದು ಇಲ್ಲಿ ೧೨ ವರ್ಷಗಳಿಗೊಮ್ಮೆ ಕುಂಭಮೇಳ ನೆರವೇರುತ್ತದೆ. ಗೋದಾವರಿಯಲ್ಲಿ ಪುಣ್ಯ ಸ್ನಾನ ಮಾಡುವುದು ವಿಶೇಷವೆಂದು ನಂಬಿಕೆ. ಶಿವರಾತ್ರಿಯಂದು ವಾರ್ಷಿಕ ಉತ್ಸವ ನೆರವೇರುತ್ತದೆ.

ಸೇರುವ ಬಗೆ.
ನಾಶಿಕ್ ಹತ್ತಿರದ ರೈಲು ನಿಲ್ದಾಣದಿಂದ ಕೇವಲ ೮ ಕಿ.ಮೀ. ದೂರದಲ್ಲಿ ತ್ರ್ಯಂಬಕೇಶ್ವರ ದೇವಾಲಯವಿದೆ. ವಾಹನ ಸೌಕರ್ಯವಿದ್ದರೂ ಪಾದಯಾತ್ರೆ ಮೂಲಕ ಕ್ರಮಿಸುವ ಭಕ್ತರೇ ಹೆಚ್ಚು. ಮುಂಬೈಯಿಂದ ೧೮೮ ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಬಸ್ ಸೌಲಭ್ಯವಿದೆ.

ವಸತಿ.
ತ್ರ್ಯಂಬಕೇಶ್ವರದಲ್ಲಿ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯ ವಸತಿ ಗೃಹವಿದೆ. ನಾಶಿಕ್ ಅಲ್ಲಿ ಸಾಕಷ್ಟು ಸುಸಜ್ಜಿತವಾದ ವಸತಿ ಗೃಹಗಳಿವೆ.

---------------------------------------------
ಚಿತ್ರ ಕೃಪೆ: www.skyscrapercity.com


Tuesday, April 07, 2009

ಮರೆಯದ ಹಾಡು

ನಿನ್ನೆ ಬೆಳಿಗ್ಗೆ ಆಫೀಸಿಗೆ ಕಾರಿನಲ್ಲಿ ಹೋಗುತ್ತಿರುವಾಗ ಎಫ್ ಎಮ್ ಕಾಮನಬಿಲ್ಲು ೧೦೧.೩ರಲ್ಲಿ ಬರುವ ಚಿತ್ರಗೀತೆಗಳನ್ನು ಕೇಳ್ತಿದ್ದೆ.

ಅದರಲ್ಲಿ ಒಂದು ಹಾಡು ಬರ್ತಿತ್ತು. ಈ ಹಾಡು ಕೇಳಿ ಬಹಳ ದಿನಗಳಾಗಿದ್ದವು. ಈ ಹಾಡು ಬಂದೊಡನೆಯೇ Volume ಜೋರು ಮಾಡಿದೆ.
ಈ ಹಾಡನ್ನು ಕೇಳ್ತಿದ್ರೆ ಕೇಳ್ತಾನೇ ಇರ್ಬೇಕು ಅಂತ ಅನ್ಸುತ್ತೆ. ಅಷ್ಟು ಚೆನ್ನಾಗಿದೆ ಈ ಹಾಡು. ಯಾವುದೋ ಲೋಕಕ್ಕೆ ಕರೆದೊಯ್ಯುವ ಶಕ್ತಿ ಈ ಹಾಡಿಗಿದೆ.

ಜಿ. ಕೆ. ವೆಂಕಟೇಶ್ ಅವರ ಸಂಗೀತ ತುಂಬಾ ಇಂಪಾಗಿದೆ.
ಆರ್. ಎನ್. ಜಯಗೋಪಾಲ್ ಅವರ ಸಾಹಿತ್ಯ ಕೂಡ ತುಂಬಾ ಚೆನ್ನಾಗಿದೆ.
ಎಸ್. ಜಾನಕಿ ಅವರ ಗಾಯನ ಸುಮಧುರವಾಗಿದೆ.

ನಿನ್ನೆಯಿಂದ ಈ ಹಾಡನ್ನು ಗುನುಗುತ್ತಿರುವೆ.
ಯಾವ ಹಾಡು ಅಂತ ಯೋಚನೆ ಮಾಡ್ತಿದ್ದೀರಾ?

ಚಿತ್ರ: ಮರೆಯದ ಹಾಡು
ಸಂಗೀತ: ಜಿ. ಕೆ. ವೆಂಕಟೇಶ್
ಸಾಹಿತ್ಯ: ಆರ್. ಎನ್. ಜಯಗೋಪಾಲ್

ಹಾಡಿನ ಸಾಹಿತ್ಯ ಕೆಳಗೆ ಬರೆದಿರುವೆ.

||ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ|
||ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ..||

||ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ|
||ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ||
||ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ|
||ತಪಸಿನಾ ಫಲವಿದೂ ದೈವದಾ ವರವಿದೂ ಆ..ಆ..||೧||

||ಶೃತಿಲಯದ ಮಿಲನದಲ್ಲೇ ದೈವೀಕನಾದ ಲೀಲೆ|
||ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ||
||ನೆನಪಿನ ತೋಟದ ಮಲ್ಲೇ ಹೂ ಮಾಲೆ|
||ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು ಆ..ಆ..||೨||

||ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ|
||ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ||
||ನಿನ್ನೊಲವಿನಲ್ಲೆ ಮಿ೦ದೂ ನಾನಿ೦ದೂ|
||ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ ಆ..ಆ..||೩||

ಈ ಹಾಡು ನಿಮಗೂ ಇಷ್ಟವಾಗಬಹುದು ಎಂದು ತಿಳಿದು ಹಾಡಿನ ಸಾಹಿತ್ಯವನ್ನು ಇಲ್ಲಿ ಪೋಸ್ಟ್ ಮಾಡಿದ್ದೀನಿ.