My Blog List

Thursday, October 08, 2009

ಬೃಹತ್ ಏಕಶಿಲಾ ಶಿಲ್ಪಗಳು

ಬೃಹತ್ ಏಕಶಿಲಾ ಶಿಲ್ಪಗಳು 




ಕಲ್ಲಿನಲ್ಲಿ ಅತ್ಯಂತ ಸೂಕ್ಷ್ಮ ಕುಸುರಿ ಕೆಲಸದಿಂದ ಹಿಡಿದು ಬೃಹತ್ ಏಕಶಿಲಾ ಶಿಲ್ಪಗಳ ಕೆತ್ತನೆಯವರೆಗೆ ಭಾರತೀಯರು ಹಿಂದಿನಿಂದಲೂ ಶಿಲ್ಪಶಾಸ್ತ್ರದಲ್ಲಿ ಪರಿಣತರಾಗಿದ್ದರು.

ಭಾರತದ, ಮಧ್ಯಪ್ರದೇಶದ ಪಶ್ಚಿಮಭಾಗದಲ್ಲಿರುವ ಬಾರ್ವಾನಿಯ ಸಮೀಪದಲ್ಲಿ, ಸಾತ್ಪುರ ಬೆಟ್ಟ ಶ್ರೇಣಿಯ ಚುಲಗಿರಿ ಶಿಖರದ ಮೇಲೆ ಒಂದು ಬೃಹತ್ ಪ್ರತಿಮೆ ಇದೆ. ಸಾವಿರದಿಂದ ಸಾವಿರದ ಐನೂರು ವರ್ಷಗಳಷ್ಟು ಪ್ರಾಚೀನವಾದ ಈ ಏಕಶಿಲೆಯ ಉಬ್ಬು ಪ್ರತಿಮೆ ಜೈನ ಪರಂಪರೆಯ ಮೊದಲನೆಯ ತೀರ್ಥಂಕರನಾದ ಋಷಭದೇವನದು. ಅನೇಕ ವರ್ಷಗಳ ಕಾಲ ದಟ್ಟ ಕಾಡಿನ ಮಧ್ಯೆ ಮರೆಯಾಗಿದ್ದ ಅದು ಅಲ್ಲಿನ ಆದಿವಾಸಿಗಳಿಗೆ ಮಾತ್ರವೇ ಪರಿಚಿತವಾಗಿತ್ತು. ೧೯೭೯ರಲ್ಲಿ ಅಕಸ್ಮಾತ್ ಬೆಳಕಿಗೆ ಬಂದ ಅದನ್ನು ಅನೇಕ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲಾಯಿತು.

ಋಷಭದೇವನ ಆ ಪ್ರತಿಮೆ ೨೫.೬ಮೀ. ಎತ್ತರವಾಗಿದೆ. ಒಂದು ಭುಜದಿಂದ ಮತ್ತೊಮ್ದು ಭುಜದ ನಡುವಣ ಅಂತರ ೮ ಮೀ. ತೋಳಿನ ಉದ್ದ ೧೪ಮೀ. ಪಾದದಿಂದ ಟೊಂಕದವರೆಗೆ ೧೧ಮೀ ಎತ್ತರವಿದೆ.

ಪ್ರತಿಮೆಗಳ ಕೆತ್ತನೆಯಲ್ಲಿ ಪ್ರಾಚೀನ ಕರ್ನಾಟಕವೇನೂ ಹಿಂದೆ ಬಿದ್ದಿರಲಿಲ್ಲ. ನಮ್ಮ ಹಲವು ದೇವಾಲಯಗಳು ಪ್ರಾಚೀನ ಶಿಲ್ಪ ವೈಭವದ ದೃಷ್ಟಾಂತಗಳಾಗಿ ನಮ್ಮ ಮುಂದಿವೆ.

ದೊಡ್ಡ ಪ್ರಮಾಣದ ಪ್ರತಿಮೆಗಳ ಪೈಕಿ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲಿರುವ ಗೊಮ್ಮಟೇಶ್ವರ ಅತ್ಯಂತ ಪ್ರಮುಖವಾದದ್ದು. ಬೆಟ್ಟದ ಮೇಲೆ ಶ್ರವಣಬೆಳಗೊಳದತ್ತ ಮುಖ ಮಾಡಿ ನಿಂತಿರುವ ಗೊಮ್ಮಟನ ವಿಗ್ರಹ ೧೭.೩೭ಮೀ ಎತ್ತರವಾಗಿದೆ. (ಇತ್ತೀಚೆಗೆ ಇದನ್ನು ೧೭.೮೩ಮೀ. ಎಂದು ಗುರುತಿಸಲಾಗಿದೆ). ಗಂಗ ದೊರೆ ರಾಚಮಲ್ಲನ ಬಳಿ ಸೇನಾಧಿಪತಿಯಾಗಿದ್ದ ಚಾವುಂಡರಾಯನು ಗೊಮ್ಮಟ ಪ್ರತಿಮೆಯ ನಿರ್ಮಾಣಕ್ಕೆ ಕಾರಣನಾಗಿದ್ದ. ಅಂದಿನ ಹೆಸರಾಂತ ಶಿಲ್ಪಿ ಅರಿಷ್ಟನೇಮಿ ಇದನ್ನು ನಿರ್ಮಿಸಿದನು. ಕ್ರಿ. ಶ. ೯೬೮ರಲ್ಲಿ ನಿರ್ಮಾಣ ಕಾರ್ಯ ಪೂರ್ತಿಗೊಂಡು ಮಹಾಮಸ್ತಕಾಭಿಷೇಕ ನೆರವೇರಿತು.

ಕರ್ನಾಟಕದ ಕಾರ್ಕಳದಲ್ಲಿ ೧೨.೫ಮೀ., ವೇಣೂರಿನಲ್ಲಿ ೧೦.೫ಮೀ., ಧರ್ಮಸ್ಥಳದಲ್ಲಿ ೧೨ಮೀ. ಎತ್ತರದ ಗೊಮ್ಮಟ ವಿಗ್ರಹಗಳಿವೆ.

8 comments:

  1. ಶ್ರವಣ ಬೆಳಗೊಳದ ಬಗ್ಗೆ ಎಷ್ಟು ಓದಿದರೂ ನೋಡಿದರೂ ನನಗೆ ಸಂತೋಷವೇ! ಏಕೆಂದರೆ ಅದು ನನ್ನ ಕಾರ್ಯಕ್ಷೇತ್ರ.
    ಅಂದ ಹಾಗೆ ಆ ಶಿಲ್ಪದ ಶಿಲ್ಪಿ ಅರಿಷ್ಟನೇಮಿ ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಅದು ಇನ್ನೂ ನಿರ್ಧಾರವಾಗಿಲ್ಲ. ಅದು ಬಾಹುಬಲಿ ಶಿಲ್ಪವವಾದರೂ ಅದು ಗೊಮ್ಮಟ ನೆಂದೇ ಪ್ರಸಿದ್ಧಾವಿದೆ. ಗೊಮ್ಮಟ ಎಂದರೆ ಸುಂದರ ಎಂದರ್ಥ. ಅದು ಚಾಮುಂಡರಾಯನಿಗೆ ಇದ್ದ ಹೆಸರೂ ಹೌದು!

    ReplyDelete
  2. ನಿಜ, ಅದೊಂದು ಮರೆಯಲಾಗದ ಕ್ಷೇತ್ರ,
    ಸುಂದರ ಫೋಟೋಕ್ಕೆ ಬರಹಕ್ಕೆ ಅಭಿನಂದನೆ

    ReplyDelete
  3. ಅನಿಲ್,

    ಶ್ರಾವಣ ಬೆಳಗೊಳದ ಮೂರ್ತಿಯ ಫೋಟೊವನ್ನು ನಾನು ಕ್ಲಿಕ್ಕಿಸಿದ್ದೇನೆ. ನಿಜಕ್ಕೂ ಅದೊಂದು ಅದ್ಭುತ ಏಕಶಿಲ್ಪವೇ ಸರಿ..

    ReplyDelete
  4. ನಿನ್ನ ಬ್ಲಾಗಿನ ಸ್ವರೂಪವೇ ಬದಲಾಗಿದೆ.ತುಂಬಾ ಚೆನ್ನಾಗಿದೆ.ಗೋಮಟೇಶ್ವರನ ಬಗೆಗಿನ ಬರಹವೂ ಚೆನ್ನಾಗಿದೆ.

    ReplyDelete
  5. ಡಾ. ಸತ್ಯ,
    ನಿಮ್ಮ ಮಾಹಿತಿಗೆ ಧನ್ಯವಾದಗಳು.

    -ಅನಿಲ್

    ReplyDelete
  6. ಡಾ. ಗುರು,
    ಲೇಖನ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

    -ಅನಿಲ್

    ReplyDelete
  7. ಶಿವು,
    ಪ್ರತಿಕ್ರಿಯೆಗೆ ಧನ್ಯವಾದಗಳು.

    -ಅನಿಲ್

    ReplyDelete
  8. ಉಷಾ,
    ಬ್ಲಾಗ್ ಸ್ವರೂಪವನ್ನು ಮತ್ತು ಬ್ಲಾಗಿನಲ್ಲಿರುವ ಬರಹವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

    -ಅನಿಲ್

    ReplyDelete