My Blog List

Monday, December 29, 2008

ಭರ್ಜರಿ ಬೇಟೆ...

ಹಲ್ಲಿಯ ಬಾಯಲ್ಲಿ ಜಿರಳೆ...

ಇಂದು ಸಂಜೆ ಕಛೇರಿಯಿಂದ ಮನೆಗೆ ಬಂದು ಕೈ-ಕಾಲು-ಮುಖ ತೊಳೆಯಲು ಬಚ್ಚಲುಮನೆಗೆ ಹೋದಾಗ ಒಂದು ಜಿರಳೆಯು ಹಲ್ಲಿಯ ಬಾಯಿಗೆ ಸಿಕ್ಕಿಕೊಂಡಿತ್ತು.

ಹಲ್ಲಿಯು ದೊಡ್ಡ ಜಿರಳೆಯನ್ನು ನುಂಗಲಾರದೆ, ಸಿಕ್ಕ ಭೋಜನವನ್ನು ಬಿಡಲೂ ಆಗದಂಥ ಪರಿಸ್ಥಿತಿಯಲ್ಲಿತ್ತು.

ತಕ್ಷಣ ಕೋಣೆಗೆ ಬಂದು ಕ್ಯಾಮೆರಾ ತೆಗೆದುಕೊಂಡು ಬಚ್ಚಲುಮನೆಗೆ ಓಡಿದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯ ಇಲ್ಲಿದೆ.

ಕೈ-ಕಾಲು-ಮುಖ ತೊಳೆದು ಅಮ್ಮ ಮಾಡಿದ್ದ ಅವಲಕ್ಕಿ ಒಗ್ಗರಣೆ ತಿಂದು, ಕಾಫಿ ಕುಡಿದು, ಕುತೂಹಲದಿಂದ ಜಿರಳೆಯ ಸ್ಥಿತಿ ಏನಾಗಿದೆಯೆಂದು ನೋಡಲು ಮತ್ತೆ

ಬಚ್ಚಲುಮನೆಗೆ ಹೋದಾಗ, ಜಿರಳೆಯು ತಪ್ಪಿಸಿಕೊಂಡಿತ್ತು.

ಹಲ್ಲಿಯು ಮೂಲೆಯಲ್ಲಿ "ಬಾಯಿಗೆ ಬಂದ ಜಿರಳೆ ಹೊಟ್ಟೆ ಸೇರಲಿಲ್ಲವೇ?" ಎಂದು ಯೋಚಿಸ್ತಿತ್ತು.


Friday, December 26, 2008

ಹಕ್ಕಿಗಳು.

ಬೇ ಬ್ಯಾಕ್ಡ್ ಶ್ರೈಕ್

ಈ ಚಿತ್ರದಲ್ಲಿರುವ ಹಕ್ಕಿ "ಬೇ ಬ್ಯಾಕ್ಡ್ ಶ್ರೈಕ್".
ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ.

ಹಕ್ಕಿಗಳು.

ಈ ಚಿತ್ರದಲ್ಲಿ ಮೇಲಿರುವ ಹಕ್ಕಿ "ರೆಡ್ ವೆಂಟೆಡ್ ಬುಲ್ ಬುಲ್".
ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ.

ಈ ಚಿತ್ರದಲ್ಲಿ ಕೆಳಗಿರುವ ಹಕ್ಕಿ "ಬ್ರಾಹ್ಮಿಣಿ ಸ್ಟಾರ್ಲಿಂಗ್".
ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ.

Tuesday, December 23, 2008

ಬಂಡೀಪುರ ಮತ್ತು ಮಧುಮಲೈ ಪ್ರವಾಸ



ಒಟ್ಟು ೨೪ ಜನ ಆರು ಕಾರುಗಳಲ್ಲಿ ಬಂಡೀಪುರಕ್ಕೆ ಡಿಸೆಂಬರ್ ೧೯ರಂದು ಹೊರಟೆವು.

ಬಂಡೀಪುರದಿಂದ ಸುಮಾರು ೧೩ಕಿ.ಮೀ ದೂರದಲ್ಲಿರುವ ಬ್ಲೂ ವ್ಯಾಲಿ ರೆಸಾರ್ಟ್, ಮಧುಮಲೈ ಎಂಬ ಜಾಗದಲ್ಲಿ ಕೋಣೆಗಳನ್ನು ಕಾದಿರಿಸಲಾಗಿತ್ತು.

ಮಧುಮಲೈ ಸಫಾರಿಯಲ್ಲಿ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ.

ನೋಡಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ.

Friday, December 19, 2008

ಹೊಸ ವರ್ಷಕ್ಕೆ ನಿಮ್ಮ ಸಂಕಲ್ಪ (Resolution) ಏನು?

ಸಾಮಾನ್ಯವಾಗಿ ಮಾಡುವ ಸಂಕಲ್ಪಗಳ (Resolutions) ಪಟ್ಟಿ ಇಲ್ಲಿದೆ:

೧.ಧೂಮಪಾನ ತ್ಯಜಿಸುವುದು.

೨. ಮದ್ಯಪಾನ ತ್ಯಜಿಸುವುದು.

೩. ಬೆಳಿಗ್ಗೆ ಬೇಗ ಏಳುವುದು.

೪. ಪ್ರತಿದಿನ ಹೊಸದೇನಾದರೂ ಕಲಿಯುವುದು.

೫. ಸಾಲದಿಂದ ಮುಕ್ತವಾಗುವುದು.

೬. To be Organized.

೭. ತೂಕ ಇಳಿಸುವುದು. (Body Weight).

೮. ಮನೆಯವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆಯುವುದು.

೯. ಹೆಚ್ಚು ನೀರು ಕುಡಿಯುವುದು ಮತ್ತು Junk Food ಕಡಿಮೆ ಮಾಡುವುದು.

೧೦. ಕೆಲಸದ ಒತ್ತಡ ಕಡಿಮೆ ಮಾಡಲು ಆಗಾಗ ಬಿಡುವು ಮಾಡಿಕೊಳ್ಳುವುದು.

--------------------------------------------

ಯಾವುದಾದರೂ ಮರೆತಿದ್ದರೆ, ಪ್ಲೀಸ್ ಪ್ರತಿಕ್ರಿಯೆ ಮೂಲಕ ಸೇರಿಸಿರಿ.


ನಮ್ಮಲ್ಲಿರುವ skills


ಒಂದಾನೊಂದು ಕಾಲದಲ್ಲಿ ಒಬ್ಬ ಮರಕಡಿಯುವ ವ್ಯಕ್ತಿ ಒಬ್ಬ ದೊಡ್ಡ ಸೌದೆ ವ್ಯಾಪಾರಿಯ ಬಳಿ ಬಂದು ಕೆಲಸಕೊಡುವಂತೆ ಕೇಳಿದ. ಕೆಲಸವೂ ಸಿಕ್ಕಿತು. ಒಳ್ಳೇ ಸಂಬಳ, ಕೈ ತುಂಬಾ ಕೆಲಸ, ಕೆಲಸ ಮಾಡುವ ವಾತವರಣವೂ ಚೆನ್ನಾಗಿತ್ತು.
ಅದಕ್ಕಾಗಿ ಆ ಮರ ಕಡಿಯುವವ ತುಂಬಾ ಹುಮ್ಮಸ್ಸಿನಿಂದ ಕೆಲಸವನ್ನು ಮಾಡಲು ಒಪ್ಪಿಕೊಂಡ.

ಒಂದು ದಿನ ವ್ಯಾಪಾರಿಯು ಮರಕಡಿಯುವವನಿಗೆ ಒಂದು ಕೊಡಲಿಯನ್ನು ಕೊಟ್ಟು, ಮರಗಳನ್ನು ಕಡಿಯಬೇಕಾದ ಜಾಗವನ್ನು ತೋರಿಸಿದ.

ಮೊದಲನೆಯ ದಿನ, ಮರಕಡಿಯುವವನು ಹದಿನೈದು ಮರಗಳನ್ನು ಕಡಿದು ತಂದನು.

ವ್ಯಾಪಾರಿಯು ಇವನ ಕೆಲಸವನ್ನು ಮೆಚ್ಚಿ ಅಭಿನಂದಿಸಿ, ಹೀಗೇ ಕೆಲಸವನ್ನು ಮಾಡು ಎಂದ.

ಈ ಮಾತುಗಳಿಂದ ಮತ್ತಷ್ಟು ಪ್ರೇರಿತನಾಗಿ ಮುಂದಿನ ದಿನ ಕಷ್ಟ ಪಟ್ಟು ಹತ್ತು ಮರಗಳನ್ನು ಕಡಿದು ತಂದನು. ಮೂರನೆಯ ದಿನ ಇನ್ನೂ ಕಷ್ಟ ಪಟ್ಟು ಏಳು ಮರಗಳನ್ನು ಕಡಿದನು.

ಹೀಗೇ ದಿನಗಳು ಉರುಳಿದಂತೆ ಅವನು ತರುತ್ತಿದ್ದ ಮರಗಳ ಸಂಖ್ಯೆ ಕಡಿಮೆಯಾಗುತ್ತಿತ್ತು.

ಅವನು "ನನ್ನ ಶಕ್ತಿ ಕುಂದುತ್ತಿದೆಯೇ? " ಎಂದು ಆಲೋಚಿಸಿದನು.

ಅವನು ವ್ಯಾಪಾರಿಯ ಬಳಿ ಬಂದು "ಒಡೆಯ, ಕ್ಷಮಿಸಿ. ಯಾಕೆ ಈ ರೀತಿ ಆಗ್ತಿದೆ ಅಂತ ನನಗೇನೂ ಗೊತ್ತಾಗ್ತಿಲ್ಲ. " ಎಂದನು.

ವ್ಯಾಪಾರಿಯು "ನಿನ್ನ ಕೊಡಲಿಯನ್ನು ಯಾವಾಗ ಹರಿತಗೊಳಿಸಿದ್ದು?" ಎಂದಾಗ,

ಮರಕಡಿಯುವವನು "ಹರಿತಗೊಳಿಸುವುದೇ? ನನಗೆ ಸಮಯವೇ ಇರಲಿಲ್ಲ. ನಾನು ಮರಗಳನ್ನು ಕಡಿಯುವುದರಲ್ಲಿ ನಿರತನಾಗಿದ್ದೆ." ಎಂದ.

ಇದೇ ರೀತಿ ನಮ್ಮಲ್ಲಿ ಬಹುತೇಕ ಮಂದಿ ನಮ್ಮ ಕೌಶಲ್ಯಗಳನ್ನು ಅಪ್ಡೇಟ್ ಮಾಡೋದೇ ಇಲ್ಲ. ನಾವು ಏನು ಕಲೆತಿದ್ದೇವೋ ಅಷ್ಟೇ ಸಾಕು ಎಂದು ಭಾವಿಸಿತ್ತೇವೆ.

ಆದರೆ ಇಷ್ಟೇ ಸಾಕು ಎನ್ನುವುದಕ್ಕಿಂತ ಇನ್ನೂ ಕಲಿಯಬೇಕು ಎಂಬ ಮನೋಭಾವ ಬೆಳೆಸಿಕೊಂಡರೆ ಚೆನ್ನ ಅಲ್ಲವೇ?

ಆದ್ದರಿಂದ ಸಮಯಕ್ಕೆ ತಕ್ಕಂತೆ ನಮ್ಮ ಕೌಶಲ್ಯಗಳನ್ನು ಹರಿತಗೊಳಿಸುತ್ತಿರಬೇಕು. ಅಲ್ವೇ?

Tuesday, December 16, 2008

ಕುರಿಂಜಲ್ ಗುಡ್ಡ, ಕುದುರೆಮುಖ.



ಕುರಿಂಜಲ್ ಗುಡ್ಡ.




ಕುರಿಂಜಲ್ ಗುಡ್ಡದ ತುತ್ತ ತುದಿಯಿಂದ...

ನನ್ನ ಸೊಸೆ.


ನನ್ನ ದೊಡ್ಡಪ್ಪನ ಮಗಳು ನವೆಂಬರ್ ೨೯ ರಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದಳು...

ಡಿಸೆಂಬರ್ ೯ ರಂದು ತೊಟ್ಟಿಲು ಶಾಸ್ತ್ರವನ್ನು ಅಜ್ಜಿಯ ಮನೆಯಲ್ಲಿ ನೆರವೇರಿಸಲಾಯಿತು.

ಆಗ ತೆಗೆದ ಚಿತ್ರ...

ಮಗುವಿನ ಪಾದ.


ಹನ್ನೊಂದನೆಯ ದಿನದ ಮಗುವಿನ ಪಾದ.

Sunday, December 07, 2008

ಅಬ್ಬಾ!!! ಎಂಥಾ ಆಚರಣೆ!!!


ಹೆಂಡತಿ: ಆ ಚಿತ್ರದಲ್ಲಿರುವ ಕುಡುಕನನ್ನು ನೋಡ್ತಾ ಇದ್ದೀರಾ?

ಗಂಡ: ಹಾ ಹೌದು!!! ಅದರಲ್ಲೇನಿದೆ ವಿಶೇಷ?

ಹೆಂಡತಿ: ಹತ್ತು ವರ್ಷಗಳ ಹಿಂದೆ ಈತನನ್ನು ಮದುವೆಯಾಗಲು ನಾನು ಒಪ್ಪಿರಲಿಲ್ಲ.

ಗಂಡ: ಅದಕ್ಕೇನೀಗ?

ಹೆಂಡತಿ: ಅಂದಿನಿಂದ ಇಂದಿನವರೆಗೂ ಈತ ಕುಡುಯುತ್ತಿದ್ದಾನೆ.

ಗಂಡ: ಓಹೋ!!!!! ಸಂತೋಷವನ್ನು ಈ ರೀತಿ ಸತತ ಹತ್ತು ವರ್ಷಗಳಿಂದ ಆಚರಿಸುತ್ತಾ ಬಂದಿದ್ದಾನೆ!!!!!!!!! Smiling

Tuesday, December 02, 2008

ಇಂದು ಚಂದಿರ ಕಾಣಿಸಿಕೊಂಡಿದ್ದು ಹೀಗೆ.



ಗುರು ಮತ್ತು ಶುಕ್ರ ಗ್ರಹಗಳು ಮೋಡದ ಮರೆಯಲ್ಲಿ ಚಂದ್ರನಿಗಿಂತ ಕೆಳಗಿದ್ದವು...

ಆದರೆ ನಿನ್ನೆಯಷ್ಟು ಹೊಳೆಯುತ್ತಿರಲಿಲ್ಲ...

Wednesday, November 26, 2008

ಮದುವೆಗೆ ಮುಂಚೆ ಮತ್ತು ಮದುವೆಯ ನಂತರ...

ಮದುವೆಗೆ ಮುಂಚೆ...

ಅವನು: ಅಬ್ಬಾ!!!

ಅವಳು: ನಾನು ನಿನ್ನನ್ನು ಬಿಟ್ಟಿರಬೇಕಾ?

ಅವನು: ಇಲ್ಲ!!! ಆ ರೀತಿ ಯೋಚನೆಯೂ ಮಾಡಬೇಡ.

ಅವಳು: ನೀನು ನನ್ನ ಪ್ರೀತಿಸುತ್ತೀಯಾ?

ಅವನು: ಸಂದೇಹವೇ ಬೇಡ... ಹಿಂದೆಯೂ ಮಾಡುತ್ತಿದ್ದೆ, ಮುಂದೆಯೂ ಮಾಡುವೆ.

ಅವಳು: ನನಗೆ ಎಂದಾದರೂ ಮೋಸ ಮಾಡಿದ್ದೀಯಾ?

ಅವನು: ಇಲ್ಲ!!! ಈ ರೀತಿ ಯಾಕೆ ಕೇಳುತ್ತಿದ್ದೀಯಾ?

ಅವಳು: ನನಗೆ ಮುತ್ತು ಕೊಡುತ್ತೀಯಾ?

ಅವನು: ಪ್ರತಿ ಅವಕಾಶಕ್ಕೆ ಕಾಯುತ್ತಿರುತ್ತೇನೆ.

ಅವಳು: ನನಗೆ ಹೊಡೆಯುತ್ತೀಯಾ?

ಅವನು: ಇಲ್ಲ!!! ನಿನಗೇನಾದರೂ ಹುಚ್ಚು ಹಿಡಿದಿದೆಯಾ?

ಅವಳು: ನಾನು ನಿನ್ನನ್ನು ನಂಬಬಹುದಾ?

ಅವನು: ಹಾ...

ಅವಳು: ಪ್ರಿಯತಮ!!!


ಮದುವೆಯ ನಂತರ...

ಬರೆದಿರುವುದನ್ನೇ ಕೆಳಗಿನಿಂದ ಮೇಲಕ್ಕೆ ಓದಿ... Smiling


Tuesday, November 25, 2008

ಕರ್ನಾಟಕ ಸಂಗೀತದ ೭೨ ಮೇಳ ರಾಗಗಳು...

ಕರ್ನಾಟಕ ಸಂಗೀತದ ಎಪ್ಪತ್ತೇಳು ಮೇಳ ರಾಗಗಳ ಪಟ್ಟಿ ಇಲ್ಲಿದೆ.

ಇಲ್ಲಿ ಪ್ರತಿ ಆರು ರಾಗಗಳಿಗೆ ಒಂದೊಂದು ಚಕ್ರಗಳಿವೆ.

ಹಾಗೇ ಎಡಗಡೆಯಲ್ಲಿರುವ ಮೊದಲ ೩೬ ರಾಗಗಳಲ್ಲಿ ಶುದ್ಧ ಮಧ್ಯಮವಿದೆ.

ಹಾಗೇನೇ ಬಲಗಡೆಯಲ್ಲಿರುವ ಕೊನೆಯ ೩೬ ರಾಗಗಳಲ್ಲಿ ಪ್ರತಿ ಮಧ್ಯಮವಿದೆ.

ಉಳಿದಂತೆ, ರಿಷಭ, ಗಾಂಧಾರ, ಧೈವತ, ನಿಷಾದಗಳು ರಾಗಗಳ ಪಟ್ಟಿಯಲ್ಲಿವೆ.

ಯಾವ ಯಾವ ರಾಗಗಳಿಗೆ ಯಾವ ಯಾವ ಸ್ವರ ಬರುತ್ತದೆಂದು ಸುಲಭವಾಗಿ ತಿಳಿದುಕೊಳ್ಳಬಹುದು...

೭೨ ಮೇಳಕರ್ತ ರಾಗಗಳು
ಶುದ್ಧ ಮಧ್ಯಮ ರಾಗಗಳು



ಪ್ರತಿ ಮಧ್ಯಮ
ರಾಗಗಳು
ಚಕ್ರದ ಹೆಸರು ಕ್ರಮ ಸಂಖ್ಯೆ ರಾಗದ ಹೆಸರು ರಿಷಭ ಗಾಂಧಾರ ಧೈವತ ನಿಷಾದ ರಾಗದ ಹೆಸರು ಕ್ರಮ ಸಂಖ್ಯೆ ಚಕ್ರದ ಹೆಸರು
೧ನೇ ಇಂದು ಚಕ್ರ
(ರಗ)
ಕನಕಾಂಗಿ ಶುದ್ಧ ಶುದ್ಧ ಶುದ್ಧ ಶುದ್ಧ ಸಾಲಗ ೩೭ ೭ನೇ ಋಶಿ ಚಕ್ರ (ರಗ)
ರತ್ನಾಂಗಿ ಶುದ್ಧ ಶುದ್ಧ ಶುದ್ಧ ಕೈಶಿಕ ಜಲಾರ್ಣವ ೩೮
ಗಾನಮೂರ್ತಿ ಶುದ್ಧ ಶುದ್ಧ ಶುದ್ಧ ಕಾಕಲಿ ಝಾಲವರಾಳಿ ೩೯
ವನಸ್ಪತಿ ಶುದ್ಧ ಶುದ್ಧ ಚತುಶೃತಿ ಕೈಶಿಕ ನವನೀತ ೪೦
ಮಾನವತಿ ಶುದ್ಧ ಶುದ್ಧ ಚತುಶೃತಿ ಕಾಕಲಿ ಪಾವನಿ ೪೧
ತಾನರೂಪ ಶುದ್ಧ ಶುದ್ಧ ಷಟ್
ಶೃತಿ
ಕಾಕಲಿ ರಘುಪ್ರಿಯ ೪೨










೨ನೇ ನೇತ್ರ ಚಕ್ರ
(ರಗಿ)
ಸೇನಾವತ ಶುದ್ಧ ಸಾಧಾರಣ ಶುದ್ಧ ಶುದ್ಧ ಗಂವಾಂಬೋಧಿ ೪೩ ೮ನೇ ವಸು ಚಕ್ರ (ರಗಿ)
ಹನುಮತೋಡಿ ಶುದ್ಧ ಸಾಧಾರಣ ಶುದ್ಧ ಕೈಶಿಕ ಭವಪ್ರಿಯ ೪೪
ಧೇನುಕ ಶುದ್ಧ ಸಾಧಾರಣ ಶುದ್ಧ ಕಾಕಲಿ ಶುಭಪಂತುವರಾಳಿ ೪೫
೧೦ ನಾಟಕಪ್ರಿಯ ಶುದ್ಧ ಸಾಧಾರಣ ಚತುಶೃತಿ ಕೈಶಿಕ ಷಡ್ವಿಧಮಾರ್ಗಿಣಿ ೪೬
೧೧ ಕೋಕಿಲಪ್ರಿಯ ಶುದ್ಧ ಸಾಧಾರಣ ಚತುಶೃತಿ ಕಾಕಲಿ ಸುವರ್ಣಾಂಗಿ ೪೭
೧೨ ರೂಪವತಿ ಶುದ್ಧ ಸಾಧಾರಣ ಷಟ್
ಶೃತಿ
ಕಾಕಲಿ ದಿವ್ಯಮಣಿ ೪೮










೩ನೇ ಅಗ್ನಿ ಚಕ್ರ
(ರಗು)
೧೩ ಗಾಯಕಪ್ರಿಯ ಶುದ್ಧ ಅಂತರ ಶುದ್ಧ ಶುದ್ಧ ಧವಳಾಂಬರಿ ೪೯ ೯ನೇ ಬ್ರಹ್ಮ ಚಕ್ರ (ರಗು)
೧೪ ವಕುಳಾಭರಣ ಶುದ್ಧ ಅಂತರ ಶುದ್ಧ ಕೈಶಿಕ ನಾಮನಾರಾಮಿಣಿ ೫೦
೧೫ ಮಾಯಾಮಾಳವಗೌಳ ಶುದ್ಧ ಅಂತರ ಶುದ್ಧ ಕಾಕಲಿ ಕಾಮವರ್ಧಿನಿ ೫೧
೧೬ ಚಕ್ರವಾಕ ಶುದ್ಧ ಅಂತರ ಚತುಶೃತಿ ಕೈಶಿಕ ರಾಮಪ್ರಿಯ ೫೨
೧೭ ಸೂರ್ಯಕಾಂತ ಶುದ್ಧ ಅಂತರ ಚತುಶೃತಿ ಕಾಕಲಿ ಗಮನಶ್ರಮ ೫೩
೧೮ ಹಾಟಕಾಂಬರಿ ಶುದ್ಧ ಅಂತರ ಷಟ್
ಶೃತಿ
ಕಾಕಲಿ ವಿಶ್ವಂಬರಿ ೫೪










೪ನೇ ವೇದ ಚಕ್ರ
(ರಿಗಿ)
೧೯ ಝಂಕಾರಧ್ವನಿ ಚತುಶೃತಿ ಸಾಧಾರಣ ಶುದ್ಧ ಶುದ್ಧ ಶ್ಯಾಮಲಾಂಗಿ ೫೫ ೧೦ನೇ ದಿಶಿ ಚಕ್ರ (ರಿಗಿ)
೨೦ ನಠಭೈರವಿ ಚತುಶೃತಿ ಸಾಧಾರಣ ಶುದ್ಧ ಕೈಶಿಕ ಷಣ್ಮುಖಪ್ರಿಯ ೫೬
೨೧ ಕೀರವಾಣಿ ಚತುಶೃತಿ ಸಾಧಾರಣ ಶುದ್ಧ ಕಾಕಲಿ ಸಿಂಹೇಂದ್ರಮದ್ಯಮ ೫೭
೨೨ ಖರಹರಪ್ರಿಯ ಚತುಶೃತಿ ಸಾಧಾರಣ ಚತುಶೃತಿ ಕೈಶಿಕ ಹೇಮವತಿ ೫೮
೨೩ ಗೌರೀಮನೋಹರಿ ಚತುಶೃತಿ ಸಾಧಾರಣ ಚತುಶೃತಿ ಕಾಕಲಿ ಧರ್ಮವತಿ ೫೯
೨೪ ವರುಣಪ್ರಿಯ ಚತುಶೃತಿ ಸಾಧಾರಣ ಷಟ್
ಶೃತಿ
ಕಾಕಲಿ ನೀತಿಮತಿ ೬೦










೫ನೇ ಬಾಣ ಚಕ್ರ
(ರಿಗು)
೨೫ ಮಾರರಂಜನಿ ಚತುಶೃತಿ ಅಂತರ ಶುದ್ಧ ಶುದ್ಧ ಕಾಂತಾಮಣಿ ೬೧ ೧೧ನೇ ರುದ್ರ ಚಕ್ರ (ರಿಗು)
೨೬ ಚಾರುಕೇಶಿ ಚತುಶೃತಿ ಅಂತರ ಶುದ್ಧ ಕೈಶಿಕ ರಿಷಭಪ್ರಿಯ ೬೨
೨೭ ಸರಸಾಂಗಿ ಚತುಶೃತಿ ಅಂತರ ಶುದ್ಧ ಕಾಕಲಿ ಲತಾಂಗಿ ೬೩
೨೮ ಹರಿಕಾಂಬೋಜಿ ಚತುಶೃತಿ ಅಂತರ ಚತುಶೃತಿ ಕೈಶಿಕ ವಾಚಸ್ಪತಿ ೬೪
೨೯ ಧೀರಶಂಕರಾಭರಣ ಚತುಶೃತಿ ಅಂತರ ಚತುಶೃತಿ ಕಾಕಲಿ ಮೇಚಕಲ್ಯಾಣಿ ೬೫
೩೦ ನಾಗಾನಂದಿನಿ ಚತುಶೃತಿ ಅಂತರ ಷಟ್
ಶೃತಿ
ಕಾಕಲಿ ಚಿಕ್ರಾಂಬರಿ ೬೬










೬ನೇ ಋತು ಚಕ್ರ
(ರುಗು)
೩೧ ಯಾಗಪ್ರಿಯ ಷಟ್
ಶೃತಿ
ಅಂತರ ಶುದ್ಧ ಶುದ್ಧ ಸಚರಿತ್ರ ೬೭ ೧೨ನೇ ಆದಿತ್ಯ ಚಕ್ರ (ರುಗು)
೩೨ ರಾಗವರ್ಧಿನಿ ಷಟ್
ಶೃತಿ
ಅಂತರ ಶುದ್ಧ ಕೈಶಿಕ ಜ್ಯೋತಿಶ್ಮತಿ ೬೮
೩೩ ಗಾಂಗೇಯಭೂಷಣಿ ಷಟ್
ಶೃತಿ
ಅಂತರ ಶುದ್ಧ ಕಾಕಲಿ ಧಾತುವರ್ಧಿನಿ ೬೯
೩೪ ವಾಗಧೀಶ್ವರಿ ಷಟ್
ಶೃತಿ
ಅಂತರ ಚತುಶೃತಿ ಕೈಶಿಕ ನಾಸಿಕಭೂಷಣಿ ೭೦
೩೫ ಶೂಲಿನಿ ಷಟ್
ಶೃತಿ
ಅಂತರ ಚತುಶೃತಿ ಕಾಕಲಿ ಕೋಸಲ ೭೧
೩೬ ಚಲನಾಟ ಷಟ್
ಶೃತಿ
ಅಂತರ ಷಟ್
ಶೃತಿ
ಕಾಕಲಿ ರಸಿಕಪ್ರಿಯ ೭೨










ಮರೆತಿದ್ದೆ:

ಮೇಲೆ ತಿಳಿಸಿರುವ ೭೨ ರಾಗಗಳೂ ಸಂಪೂರ್ಣ ರಾಗಗಳು.

ಈ ೭೨ ರಾಗಗಳಿಂದಲೇ ಅನೇಕ ರಾಗಗಳು ಕರ್ನಾಟಕ ಸಂಗೀತದಲ್ಲಿ ಸೃಷ್ಟಿಯಾಗಿರುವುದು.

ಆಗುತ್ತೋ? ಆಗೊಲ್ವೋ?

ಸೋಮಾರಿ ಪುರಾಣ

ಕ್ರೀಮ್ ಬಿಸ್ಕತ್ ನಲ್ಲಿ ಕ್ರೀಮ್ ಇರುತ್ತೆ... ಆದರೆ ಬೆಣ್ಣೆ ಬಿಸ್ಕತ್ ನಲ್ಲಿ ಬೆಣ್ಣೆ ಇರುತ್ತಾ?

ನೀನ್ ಬಸ್ಸಿನಲ್ಲಿ ಹತ್ತಿದ್ರೂ... ಬಸ್ ನಿನ್ ಮೇಲೆ ಹತ್ತಿದ್ರೂ ಟಿಕೆಟ್ ತೊಗೊಳ್ಳೋನು ನೀನೇ... Smiling

ಟಿಕೆಟ್ ತೊಗೊಂಡು ಒಳಗೆ ಹೋಗೋದು "Cinema theater" ಗೆ… ಒಳಗೆ ಹೋಗಿ ಟಿಕೆಟ್ ತೊಗೊಳೋದು "Operation Theater"…

Cell ನಲ್ಲಿ 'BALANCE' ಇಲ್ಲ ಅಂದ್ರೆ 'CALL' ಮಾಡೋಕೆ ಆಗೊಲ್ಲ... ಮನುಷ್ಯನಿಗೆ ’ಕಾಲು’ ಇಲ್ಲ ಅಂದ್ರೆ 'BALANCE' ಮಾಡೋಕೆ ಆಗೊಲ್ಲ...

ರೈಲು ಎಷ್ಟೇ ವೇಗವಾಗಿ ಚಲಿಸಿದರೂ ಕೊನೆಯ ಬೋಗಿ ಕೊನೆಗೇ ಬರೋದು...

ಬಸ್ ಹೋದ್ರೂ 'BUS STAND' ಅಲ್ಲೇ ಇರುತ್ತೆ... ಆದ್ರೆ ಸೈಕಲ್ ಹೋದ್ರೆ 'CYCLE STAND' ಜೊತೆಗೇ ಹೋಗುತ್ತೆ...

ನಾಯಿಗೆ ನಾಲ್ಕು ಕಾಲುಗಳೇ ಇರ್ಬಹುದು... ಆದ್ರೂ ಅದಕ್ಕೆ ಕಾಲ ಮೇಲೆ ಕಾಲು ಹಾಕಿಕೊಂಡು ಕೂರೋದಕ್ಕೆ ಆಗುತ್ತಾ?

ಸೊಳ್ಳೆ ಕಚ್ಚಿದರೆ ’ಆನೆ ಕಾಲು’ ಬರುತ್ತೆ. ಆದ್ರೆ, ಆನೆ ಕಚ್ಚಿದ್ರೆ ’ಸೊಳ್ಳೆ ಕಾಲು’ ಬರುತ್ತಾ?

೧೦ ಇರುವೆಗಳು ಸೇರಿ ಒಂದು ಆನೆಗೆ ಕಚ್ಚಬಹುದು... ಆದ್ರೆ ೧೦ ಆನೆ ಸೇರಿ ಒಂದು ಇರುವೆನ ಕಚ್ಚೋಕೆ ಆಗುತ್ತಾ?

ಹೇಗೆ ಓದಿದರೂ ಒಂದೇ!!!

ಮೊನ್ನೆ ಭಾನುವಾರ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ತರಿಸುವ ವಿಕ ದಿನಪತ್ರಿಕೆಯ ಸಾಪ್ತಾಹಿಕ ವಿಜಯದಲ್ಲಿ ಕಂಡು ಬಂದದ್ದು ಈ ಪದಗಳು.

ಇಂಥಾ ಪದಗಳಿಗೆ ಪಲಿನ್ದ್ರೋಮೆ ಎಂದು ಕರೆಯಲಾಗುವುದು...

ಇಂಥಾ ಪದಗಳನ್ನು ಹೇಗೆ ಓದಿದರೂ ಸರಿ.

ಕನಕ

ಕಿಟಕಿ

ಕಟಕ

ಕುಟುಕು

ಗುಡುಗು

ಗುನುಗು

ಚಮಚ

ಜಲಜ

ನಮನ

ನರ್ತನ

ಸರಸ

ಸಮಾಸ

ಸಮೋಸ

ಟಮೋಟ

ಕುಬೇರನಿಗೇನಿರಬೇಕು

ಗದಗ

ರಿಪೇರಿ

ವಿಕಟಕವಿ

ಮಧ್ಯಮ

ಇದೇ ರೀತಿಯ ಇನ್ನಷ್ಟು ಪದಗಳನ್ನು ಸೇರಿಸ್ತೀರಾ?


~.~

Monday, November 10, 2008

ಭಾರತಕ್ಕೆ ಮರಳಿ ಬಂದ ಬಾರ್ಡರ್‍-ಗವಾಸ್ಕರ್‍ ಟ್ರೋಫಿ

ಭಾರತ ತಂಡದ ವಿಜಯೋತ್ಸವ... ಇಂದು ಕ್ರಿಕೆಟ್ ಲೋಕದಲ್ಲಿ ಭಾರತಕ್ಕೆ ಅತ್ಯಂತ ಸ್ಮರಣೀಯ ದಿನ.

ಇಂದು ಭಾರತ ಆಸ್ಟ್ರೇಲಿಯಾವನ್ನು ೧೭೨ ರನ್ ಗಳ ಅಂತರದಿಂದ ಸೋಲಿಸಿ ಬಾರ್ಡರ್‍-ಗವಾಸ್ಕರ್‍ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

೨೦೦೪ರಲ್ಲಿ ಭಾರತದಲ್ಲಿ ಆಡಿದ್ದಾಗ ಈ ಟ್ರೋಫಿಯನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿತ್ತು.

೨೦೦೭/೦೮ ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲೂ ಭಾರತ ೨-೧ ಅಂತರದಿಂದ ಸೋತಿತ್ತು.

ಆದರೆ, ಈ ಸರಣಿಯಲ್ಲಿ ಭಾರತ ೨-೦ ಅಂತರದಿಂದ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿ ಅವರಿಗೆ ಮಣ್ಣು ಮುಕ್ಕಿಸಿದೆ.

ಭಾರತ ಈ ಪಂದ್ಯದಲ್ಲಿ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ೪೪೧ ರನ್ ಗಳನ್ನು ಗಳಿಸಿತ್ತು.

ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ೩೫೫ ರನ್ ಗಳಿಸಿ ಆಲೌಟ್ ಆಗಿತ್ತು.

ಮತ್ತೆ ಎರಡನೆಯ ಇನ್ನಿಂಗ್ಸ್ ನಲ್ಲಿ ಭಾರತ ೨೯೫ ರನ್ ಗಳನ್ನು ಗಳಿಸಿ ಆಲೌಟ್ ಆಯಿತು.

ಆಸ್ಟ್ರೇಲಿಯಾಗೆ ಗೆಲ್ಲಲು ೩೮೧ ರನ್ ಗಳು ಬೇಕಾಗಿತ್ತು.

ಆಸ್ಟ್ರೇಲಿಯಾ ಇದಕ್ಕೆ ಉತ್ತರವಾಗಿ ಕೇವಲ ೨೦೯ ರನ್ ಗಳನ್ನು ಗಳಿಸಿ ಆಲೌಟ್ ಆಯಿತು.

ಹರ್ಭಜನ್ ಸಿಂಗ್ ಮಿಚೆಲ್ಲ್ ಜಾನ್ಸನ್ ಅವರನ್ನು ಎಲ್. ಬಿ. ಡಬ್ಲ್ಯು ಮೂಲಕ ಅವರ ವಿಕೆಟ್ ಕಬಳಿಸುತ್ತಿದ್ದಂತೆಯೇ ಭಾರತ ಈ ಟ್ರೋಫಿಯನ್ನು ಗೆದ್ದುಕೊಂಡಿತು.

ಇನ್ನೊಂದು ಸೋಜಿಗದ ಸಂಗತಿ.

ಭಾರತ ಮೊದಲ ಇನ್ನಿಂಗ್ಸ್: ೪೪೧ ರನ್ ಗಳು.

ಎರಡನೆಯ ಇನ್ನಿಂಗ್ಸ್: ೨೯೫ ರನ್ ಗಳು.

ಅಂತರ: ೧೪೬.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: ೩೫೫ ರನ್ ಗಳು.

ಎರಡನೆಯ ಇನ್ನಿಂಗ್ಸ್: ೨೦೯ ರನ್ ಗಳು.

ಅಂತರ: ೧೪೬.

ಮರೆತಿದ್ದೆ: ಈ ವಿಜಯದ ನಡುವೆ ಒಂದು ವಿಷಾದಕರ ಸಂಗತಿಯೆಂದರೆ, ಇಂದು ಸೌರವ್ ಗಂಗೂಲಿ ತಮ್ಮ ಕ್ರಿಕೆಟ್ ಜೀವನದ ಕೊನೆಯ ಪಂದ್ಯವನ್ನು ಆಡಿದ್ದು Sad

Sunday, November 09, 2008

ವಚನಕಾರರು - ೨

ಬಸವಣ್ಣಬಸವಣ್ಣನವರು (೧೧೩೦ - ೧೧೬೭): ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರು. ಜನರಲ್ಲಿ ಮೇಲುಕೀಳೆಂಬ ಭಾವನೆಯನ್ನು ತೊಡೆದು ಹಾಕಲು ಯತ್ನಿಸಿ ಭಾವೈಕ್ಯತೆಯನ್ನು ಸಾಧಿಸಲು ಶ್ರಮಿಸಿದರು. ವೀರಶೈವ ಮತವನ್ನು ಬಲಪಡಿಸಿದರು.

ಗಹನವಾದ ವಿಷಯಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದರು. ಹನ್ನೆರಡನೆಯ ಶತಮಾನದಲ್ಲೇ ಸಾಮಾಜಿಕ ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವಂಥಹ ಕಾರ್ಯವು ಕನ್ನಡಿಗರಾದ ಇವರಿಂದ ನಡೆಯಿತು.

ಬಾಗೇವಾಡಿಯಲ್ಲಿ ಜನಿಸಿದರು ಬಸವಣ್ಣನವರು. ಬಿಜ್ಜಳನ ಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಜೊತೆಗೆ ಶಿವಶರಣರ ಸೇವೆಯನ್ನು ಮಾಡುತ್ತಾ, ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಸಂಗಮೇಶ್ವರನ ಭಕ್ತರಾಗಿ "ಕೂಡಲಸಂಗಮದೇವ" ಎಂಬ ಅಂಕಿತದೊಡನೆ ಅನೇಕ ವಚನಗಳನ್ನು ರಚಿಸಿದರು.

ಇಂದಿಗೂ ಅಣ್ಣ ಬಸವಣ್ಣನವರ ವಚನಗಳು ತುಂಬಾ ಪ್ರಸಿದ್ಧವಾಗಿವೆ.

ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ

Friday, November 07, 2008

ವಚನಕಾರರು - ೧

ಅಕ್ಕಮಹಾದೇವಿಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಮೂಡಿಸಿದ ಕರ್ನಾಟಕದ ಪ್ರಪ್ರಥಮ ಮಹಿಳೆಯೆಂದರೆ ಅಕ್ಕಮಹಾದೇವಿ.

ಹನ್ನೆರಡನೆಯ ಶತಮಾನದಲ್ಲೇ ಇಂತಹ ಮಹಿಳಾ ಜಾಗೃತಿಯನ್ನು ಮೂಡಿಸಿದರು. ಸಂಸಾರವನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನ ದೇವರೇ ತನ್ನ ಪತಿಯೆಂಬುದಾಗಿ ನಂಬಿದರು. ತಮ್ಮ ವೈರಾಗ್ಯದ ಮೂಲಕವೇ ಪುರುಷರೊಡನೆ ಹೋರಾಡಿ ಸಮಾಜೋದ್ಧಾರದ ಕಾರ್ಯದಲ್ಲಿ ನೆರವಾದರು ಈ ಶಿವಶರಣೆ. ತಮ್ಮ ಭಾವನೆಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ತಿಳಿಸಿದರು. ಲಿಂಗಭೇದವಿಲ್ಲದೆ, ಜಾತಿಭೇದವಿಲ್ಲದೆ ಪ್ರತಿಯೊಬ್ಬರೂ ಲೋಕವಿಚಾರಗಳನ್ನು ಅರಿಯುವಂತೆ ಮಾಡಿದರು.

ಉಡುತಡಿ ಗ್ರಾಮವಾಸಿಗಳಾದ ಮಹಾದೇವಿ ಪರಮಶಿವಭಕ್ತರಾಗಿದ್ದರು. ಶ್ರೀಶೈಲ ಚೆನ್ನಮಲ್ಲಿಕಾರ್ಜುನನೇ ಇವರ ಆರಾಧ್ಯದೈವವಾದನು. ಶಿವಭಕ್ತೆಯಾದ ಮಹಾದೇವಿಯು ಕೆಲವು ಷರತ್ತುಗಳನ್ನು ಹಾಕಿ ರಾಜ ಕೌಶಿಕನನ್ನು ಮದುವೆಯಾದರು. ಆಕೆಯ ಷರತ್ತುಗಳನ್ನು ರಾಜನು ಮುರಿಯಲು ಸಂಸಾರವನ್ನು ತ್ಯಜಿಸಿ ವಿರಾಗಿಯಾದರು. ಎಲ್ಲರಿಗೂ ಅಕ್ಕಳಾಗಿ ಅಕ್ಕಮಹಾದೇವಿ ಎನಿಸಿದರು. ಶಿವಶರಣರಾದ ಬಸವಣ್ಣನವರ ಸಮಕಾಲೀನರು ಇವರು.

ಸರ್ವಸಂಗ ಪರುತ್ಯಾಗಿಯಾಗಿ ಶಿವನನ್ನೇ ಪತಿಯೆಂದು ನಂಬಿ ಚೆನ್ನಮಲ್ಲಿಕಾರ್ಜುನ ಅಂಕಿತದೊಡನೆ ಅನೇಕ ವಚನಗಳನ್ನು ತಿಳಿಗನ್ನಡದಲ್ಲಿ ರಚಿಸಿ ಗಹನವಾದ ತತ್ವಗಳನ್ನು ಸಾಮಾನ್ಯ ಜನರಿಗೂ ತಲುಪಿಸಿದರು. ಶಿವಶರಣೆಯಾಗಿ ಅಕ್ಕನವರು ಅಂದಿನ ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತಸ್ಥಾನವನ್ನು ಗಳಿಸಿಕೊಟ್ಟರು.

ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ

Sunday, November 02, 2008

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಮಹಾನ್ ಹೋರಾಟಗಾರ.

ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ಗೆ ಕುಂಬ್ಳೆ ವಿದಾಯ ಹೇಳಿದ್ದಾರೆ. ಇಂದು ಅವರು ತಮ್ಮ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದರು.

ಅನಿಲ್ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦)

ಕುಂಬ್ಳೆ ಲೆಗ್ ಸ್ಪಿನ್ನರ್. ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ.

ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು. ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ.

ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೬೦೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ.

ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ.

ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು.

ಟೆಸ್ಟ್ ಕ್ರಿಕೆಟ್ ನಲ್ಲಿ ಇವರು ಪಡೆದ ಮೊದಲ ವಿಕೆಟ್ ಇಂಗ್ಲೆಂಡ್ ನ ಅಲನ್ ಲ್ಯಾಂಬ್.
ಟೆಸ್ಟ್ ಕ್ರಿಕೆಟ್ ನಲ್ಲಿ ಇವರು ಪಡೆದ ಕೊನೆಯ ವಿಕೆಟ್ ಆಸ್ಟ್ರೇಲಿಯಾದ ಮಿಚೆಲ್ಲ್ ಜಾನ್ಸನ್.

೬೦೦ ವಿಕೆಟ್ಗಳನ್ನು ಪಡೆದವರಲ್ಲಿ ಕುಂಬ್ಳೆ ಮೂರನೆಯವರು.

೧೩೨ ಟೆಸ್ಟ್ ಪಂದ್ಯಗಳನ್ನು ಆಡಿ ೬೧೯ ವಿಕೆಟ್ಗಳನ್ನು ಪಡೆದಿದ್ದಾರೆ.

೨೭೧ ಏಕ ದಿನ ಪಂದ್ಯಗಳಲ್ಲಿ ೩೩೭ ವಿಕೆಟ್ಗಳನ್ನು ಪಡೆದಿದ್ದಾರೆ.

ದಿಲ್ಲಿಯ ಫಿರೋಜ್ ಷಾ ಕೋಟ್ಲಾ ದಲ್ಲಿ ಪಾಕಿಸ್ತಾನದ ವಿರುದ್ಧ ೧೦/೭೪ ಅವರ ಟೆಸ್ಟ್ ಜೀವನದ ಶ್ರೇಷ್ಟ ಬೌಲಿಂಗ್ ಪ್ರದರ್ಶನ.

ವೆಸ್ಟ್ ಇಂಡೀಸ್ ವಿರುದ್ಧ ೬/೧೨ ಅವರ ಏಕದಿನದ ಶ್ರೇಷ್ಟ ಬೌಲಿಂಗ್ ಪ್ರದರ್ಶನ.

ಚಿತ್ರಪುಟ: ಅಂತರ್ಜಾಲದಿಂದ ಡೌನ್ ಲೋಡ್ ಮಾಡಿದ್ದು.

Wednesday, October 29, 2008

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೩

<span title=

ಮುತ್ತುಸ್ವಾಮಿ ದೀಕ್ಷಿತರು (೧೭೭೫ - ೧೮೩೫): ತಿರುವಾರೂರಿನಲ್ಲೇ ಜನಿಸಿದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರು. ಸಂಗೀತ ವಿದ್ವಾಂಸರಾದ, ವಾಗ್ಗೇಯಕಾರರಾದ ರಾಮಸ್ವಾಮಿ ದೀಕ್ಷಿತರ ಹಾಗೂ ಭಾಗಿರಥಮ್ಮನವರ ಪುತ್ರರಾಗಿ ಜನಿಸಿದರು. ತಂದೆಯಿಂದಲೇ ಸಂಗೀತವನ್ನು ಕಲಿತರು. ವೈಣಿಕರಾಗಿ, ಗಾಯಕರಾಗಿ, ಸಂಸ್ಕೃತ, ತಂತ್ರಶಾಸ್ತ್ರ, ಮಂತ್ರಶಾಸ್ತ್ರ, ಜ್ಯೋತಿಶಾಸ್ತ್ರ, ಅಲಂಕಾರ ಶಾಸ್ತ್ರಗಳಲ್ಲಿ ನಿಷ್ಣಾತರಾಗಿದ್ದರು. ಚಿದಂಬರನಾಥ ಯೋಗಿಗಳಿಂದ ಶ್ರೀವಿದ್ಯಾಮಂತ್ರೋಪದೇಶವನ್ನು ಪಡೆದರು. ಗುರುಗಳೊಡನೆ ಕಾಶಿಗೆ ತೆರಳಿ ಅಲ್ಲಿ ಐದು ವರ್ಷಗಳ ಕಾಲ ಮಂತ್ರಜಪವನ್ನು ನಡೆಸಿದರು. ಗಂಗಾನದಿಯಲ್ಲಿ ನಿಂತು ಜಪವನ್ನು ಮಾಡಿ ಮುಗಿಸಿದಾಗ ಅವರ ಕೈಗೆ ವೀಣೆಯು ತಾನಾಗಿಯೇ ಬಂದಿತ್ತು. ಕಾಶಿಯಲ್ಲಿದ್ದಾಗ ದೀಕ್ಷಿತರು ಕರ್ನಾಟಕ ಸಂಗೀತದ ಜೊತೆ ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡಿದರು. ಚಿಕ್ಕಂದಿನಲ್ಲೇ ಇವರಿಗೆ ಪಾಶ್ಚಾತ್ಯ ಸಂಗೀತದ ಪರಿಚಯವಾಯಿತು. ತಂದೆಗೆ ಆಪ್ತಮಿತ್ರರಾದ ಚರ್ಚಿನ ಪಾದರಿಗಳ ಸಹವಾಸದಲ್ಲಿ ಪಾಶ್ಚಾತ್ಯ ಸಂಗೀತದ ರೂಢಮೂಲಗಳನ್ನು ಅರಿತುಕೊಂಡರು. ಹೀಗೆ ಮೂರು ಮುಖ್ಯವಾದ ಶಾಸ್ತ್ರೀಯ ಸಂಗೀತ ಪದ್ಧತಿಗಳ ಪರಿಚಯವಾಯಿತು.

ಕಾಶಿಯಿಂದ ತಿರುವಾರೂರಿಗೆ ಹಿಂದಿರುಗುವಾಗ ತಿರುತ್ತಣಿಯಲ್ಲಿ ಸುಬ್ರಹ್ಮಣ್ಯ ದೇವರು ಪ್ರತ್ಯಕ್ಷರಾಗಿ ವಾಗ್ಗೇಯಕಾರನಾಗುವ ಶಕ್ತಿಯನ್ನು ಅನುಗ್ರಹಿಸಿದರು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ "ಗುರುಗುಹ" ಎಂಬ ಅಂಕಿತದೊಡನೆ ಕೃತಿ ರಚನೆಯನ್ನು ಆರಂಭಿಸಿದರು. ಇವರ ಮೊದಲ ಕೃತಿ ’ಶ್ರೀನಾಥಾದಿ’ ಮಾಯಾಮಾಳವಗೌಳ ರಾಗದಲ್ಲಿ, ಆದಿತಾಳದಲ್ಲಿ ರಚಿತವಾಗಿದೆ. ಪಲ್ಲವಿಯಲ್ಲಿಯೇ ಮೂರು ಕಾಲಗಳನ್ನು ಹೊಂದಿಸಿ ಮಾಡಿರುವ ವಿಶಿಷ್ಟ ಕೃತಿ ಇದು. ಕೆಲವು ಕೃತಿಗಳನ್ನು ಸಮಷ್ಟಿಚರಣದೊಡನೆ ರಚಿಸಿದ್ದಾರೆ. ಮಧ್ಯಮಕಾಲ ಸಾಹಿತ್ಯವನ್ನು ಕೃತಿಗಳಿಗೆ ಅಳವಡಿಸಿದ್ದಾರೆ.

ಪಿಟೀಲು ವಾದ್ಯವನ್ನು ಕರ್ನಾಟಕ ಸಂಗೀತಕ್ಕೆ ತಂದ ಕೀರ್ತಿ ಮುತ್ತುಸ್ವಾಮಿ ದಿಕ್ಷಿತರದು. ನಾಗಸ್ವರ ವಾದನ ಕ್ರಮವನ್ನು ರೂಪಿಸಿದವರೇ ದೀಕ್ಷಿತರು. ವಾಗ್ಗೇಯಕಾರರಾಗಿ, ವರ್ಣ, ಕೃತಿ, ಕೀರ್ತನೆ, ರಾಗಮಾಲಿಕೆಗಳನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ಅನೇಕ ಆರ್ಷೇಯವಾದ ರಾಗಗಳನ್ನು ತಮ್ಮ ಕೃತಿಗಳ ಮೂಲಕ ಜೀವಂತಗೊಳಿಸಿದ್ದಾರೆ. ಎಪ್ಪತ್ತೆರಡು ಮೇಳಗಳಲ್ಲಿ ಕೃತಿಗಳನ್ನು ರಚಿಸಿ, ಮೇಳಗಳಿಗೆ ರಾಗ ಸ್ವರೂಪವನ್ನು ನೀಡಿದ್ದಾರೆ. ಸಮುದಾಯ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ನವಗ್ರಹ ಕೃತಿಗಳು, ಪಂಚಲಿಂಗ ಕೃತಿಗಳು, ನವಾವರಣ ಕೃತಿಗಳು ಮುಖ್ಯವಾದವು. ಪಾಶ್ಚಾತ್ಯ ಸಂಗೀತ ಮಟ್ಟುಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ದೀಕ್ಷಿತರು ತಮ್ಮ ರಚನೆಗಳಲ್ಲಿ ಸೂಳಾದಿ ಸಪ್ತತಾಳಗಳನ್ನು ಮಾತ್ರ ಬಳಸಿದ್ದಾರೆ.
ದೀಕ್ಷಿತರು ಉತ್ತಮ ಶಿಷ್ಯರನ್ನು ಪಡೆದಿದ್ದರು. ಅವರ ದೌಹಿತ್ರರು (ಮಗಳ ಮಗ) ಮತ್ತು ದತ್ತು ಪುತ್ರರು ಆಗಿದ್ದ ಸುಬ್ಬರಾಮ ದೀಕ್ಷಿತರು ಅವರ ರಚನೆಗಳನ್ನು ಸ್ವರ ಲಿಪಿಯ ಮೂಲಕ ಬರೆದಿಟ್ಟು, ಮುಂದಿನ ಪೀಳಿಗೆಗೆ ಶುದ್ಧವಾದ ಸಂಪ್ರದಾಯಬದ್ಧವಾದ ಸಂಗೀತವನ್ನು ಉಳಿಸಿದ್ದಾರೆ.

ಇವರು ರಚಿಸಿರುವ ಕೃತಿ "ವಾತಾಪಿ ಗಣಪತಿಂ ಭಜೇಹಂ" ಇಲ್ಲಿದೆ ನೋಡಿ.

ಇವರು ರಚಿಸಿರುವ ಕೃತಿ "ಗಣನಾಯಕಮ್" ಇಲ್ಲಿದೆ ನೋಡಿ.

ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨

<span title=

ತ್ಯಾಗರಾಜರು (೧೭೬೭ - ೧೮೪೭): ಕರ್ನಾಟಕ ಸಂಗೀತ ಚರಿತ್ರೆಯಲ್ಲಿ ವಾಗ್ಗೇಯಕಾರ ಸಾರ್ವಭೌಮ ಎನಿಸಿಕೊಂಡ ತ್ಯಾಗರಾಜರು ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರು. ತಿರುವಾರೂರಿನಲ್ಲಿ ರಾಮಬ್ರಹ್ಮ ಮತ್ತು ಸೀತಮ್ಮ ದಂಪತಿಗಳಿಗೆ ಜನಿಸಿದ ಇವರು ಬಾಲ್ಯದಲ್ಲಿಯೇ ಸಂಗೀತ, ಸಾಹಿತ್ಯ, ವೇದ, ಪುರಾಣ, ಉಪನಿಷತ್ತು, ಅಲಂಕಾರ ಶಾಸ್ತ್ರಗಳ ಅಧ್ಯಯನ ಮಾಡಿದ್ದರು. ತಮ್ಮ ಐದನೇ ವಯಸ್ಸಿನಲ್ಲೇ ವಾಲ್ಮೀಕಿ ರಾಮಾಯಣದ ಇಪ್ಪತ್ತನಾಲ್ಕು ಶ್ಲೋಕಗಳನ್ನು ಕಂಠಪಾಠ ಮಾಡಿ ಶ್ರೀ ತ್ಯಾಗರಾಜರು ಸುಮಧುರವಾಗಿ ಹಾಡುತ್ತಿದ್ದರು. ತಂದೆ ರಾಮಬ್ರಹ್ಮರ ರಾಮಾಯಣದ ವ್ಯಾಖ್ಯಾನಕ್ಕೆ ಶ್ಲೋಕಗಳನ್ನು ಹಾಡುತ್ತಿದ್ದರು.

ಸೊಂಠಿ ವೆಂಕಟರಮಣ ಭಾಗವತರ ಶಿಷ್ಯರಾಗಿ, ತಮ್ಮ ಎಂಟನೇ ವಯಸ್ಸಿನಲ್ಲಿ ಶಿಷ್ಯವೃತ್ತಿಯನ್ನು ಆರಂಭಿಸಿ, ಎರಡು ವರ್ಷಗಳ ಕಾಲಾವಧಿಯಲ್ಲಿ ಸಂಗೀತದಲ್ಲಿ ಪಾರಂಗತರಾದರು. ಗುರುಗಳು ಹೆಮ್ಮೆಯಿಂದ "ದೊರಕುನಾ ಇಟುವಂಟಿ ಶಿಷ್ಯುಡು" ಅಂದರೆ "ಇಂತಹ ಶಿಷ್ಯನು ದೊರಕುವನೇ" ಎಂದು ಸಭಿಕರ ಮುಂದೆ ತ್ಯಾಗರಾಜರನ್ನು ಹೊಗಳಿದರು.

ಮುಂದೆ ರಾಮಕೃಷ್ಣಾನಂದ ಯತಿಗಳಿಂದ ತಾರಕನಾಮ ಉಪದೇಶವಾಯಿತು. ಶ್ರೀ ರಾಮಚಂದ್ರನೇ ಅವರ ಸರ್ವಸ್ವವಾದನು. ತೊಂಬತ್ತಾರು ಕೋಟಿ ರಾಮನಾಮ ಮಂತ್ರವನ್ನು ಜಪಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಿ, ಅವನ ದರ್ಶನವನ್ನು ಅನೇಕ ಬಾರಿ ಪಡೆದರು. ಶ್ರೀ ತ್ಯಾಗರಾಜರ ಪರಂಪರೆಯಲ್ಲಿ ಕರ್ನಾಟಕ ಸಂಗೀತವು ಸಮೃದ್ಧವಾಗಿ ಬೆಳೆದು, ಜನಮನವನ್ನು ಸೂರೆಗೊಂಡಿತು.

ಅವರ ಕೃತಿಗಳು ಭಕ್ತಿ ಪ್ರಧಾನವಾಗಿ ತತ್ವಗಳು, ನೀತಿಗಳು, ಪುರಾಣಗಳ ಸತ್ವವನ್ನು ಒಳಗೊಂಡಿವೆ. ಮೊಟ್ಟಮೊದಲಿಗೆ ಕೃತಿಗಳಲ್ಲಿ ಸಂಗತಿಗಳನ್ನು ಅಳವಡಿಸಿದವರು ತ್ಯಾಗರಾಜರು ಎಂಬ ಹೆಗ್ಗಳಿಕೆ ಇವರದು. ತಾವು ಭೇಟಿ ಕೊಟ್ಟ ಕ್ಷೇತ್ರಗಳ ಅಧಿದೇವತೆಗಳನ್ನು ಸರಳಸುಂದರ ಕೃತಿಗಳ ಮೂಲಕ ಸ್ತುತಿಸಿರುವುದು ಲಾಲ್ಗುಡಿ ಪಂಚರತ್ನ, ತಿರುವೊಟ್ಟ್ರಿಯೂರು ಪಂಚರತ್ನ, ಕೋವೂರು ಪಂಚರತ್ನಗಳೆಂದು ಪ್ರಸಿದ್ದವಾಗಿವೆ. ಅವರು ರಚಿಸಿರುವ ಘನರಾಗ ಪಂಚರತ್ನಗಳಂತೂ ಸಂಗೀತ ಕ್ಷೇತ್ರಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ.

ಇವರ ಪತ್ನಿ ಶಾಂತಮ್ಮ, ಮಗಳು ಸೀತಾಲಕ್ಷ್ಮಿ.

ಅನೇಕ ಶಿಷ್ಯರಿಗೆ ತರಬೇತಿಯನ್ನು ನೀಡಿ ತಮ್ಮ ಸಂಗೀತ ರಚನೆಗಳು ಪರಂಪರಾಗತವಾಗಿ ಉಳಿಯುವಂತೆ ಮಾಡಿದರು. ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಪುಷ್ಯ ಬಹುಳ ಪಂಚಮಿಯಂದು ಶ್ರೀರಾಮನ ಪಾದಾರವಿಂದವನ್ನು ಸೇರಿದರು. ನಾದ ಬ್ರಹ್ಮಾನಂದರಾಗಿ, ನಾದ ಯೋಗಿಯೆನಿಸಿದರು. ಇಂದಿಗೂ ತ್ಯಾಗರಾಜರ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇಶದ ಮೂಲೆಮೂಲೆಗಳಲ್ಲೂ ತ್ಯಾಗರಾಜರ ಆರಾಧನೆಯನ್ನು ಆಚರಿಸುವುದು ವಾಡಿಕೆಯಾಗಿದೆ.

ತ್ಯಾಗರಾಜರ ಪಂಚರತ್ನ ಕೀರ್ತನೆಗಳು ಇಲ್ಲಿವೆ ನೋಡಿ...

೧. ಜಗದಾನಂದ ಕಾರಕ - ನಾಟ ರಾಗ - ಆದಿತಾಳ

೨. ದುಡುಕು ಗಲ - ಗೌಳರಾಗ - ಆದಿತಾಳ

೩. ಸಾಧಿಂಚೆನೆ - ಆರಭಿ ರಾಗ - ಆದಿತಾಳ

೪. ಕನಕನ ರುಚಿರಾ - ವರಾಳಿ ರಾಗ - ಆದಿತಾಳ

೫. ಎಂದರೋ ಮಹಾನುಭಾವುಲು - ಶ್ರೀ ರಾಗ - ಆದಿತಾಳ




ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ

Tuesday, October 28, 2008

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೧

<span title=

ಶ್ಯಾಮಶಾಸ್ತ್ರಿಗಳು (ಕ್ರಿ.ಶ. ೧೭೬೨ - ೧೮೨೭): ಸಂಗೀತ ತ್ರಿಮೂರ್ತಿಗಳಲ್ಲಿ ಹಿರಿಯವರಾದ ಶ್ಯಾಮಶಾಸ್ತ್ರಿಗಳು ಕಾಮಾಕ್ಷಿದೇವಿಯ ಉಪಾಸನೆಯನ್ನು ಮಾಡಿ ದೇವಿಯನ್ನು ಒಲಿಸಿಕೊಂಡು, ಅವಳೊಡನೆ ಮಾತನಾಡಿದ್ದರು. ಬಂಗಾರು ಕಾಮಾಕ್ಷಿಯನ್ನು ಎಡೆಬಿಡದೆ ಆರಾಧಿಸಿದ್ದರು. ಅವಳನ್ನು ತಮ್ಮ ಕೃತಿಗಳ ಮೂಲಕ ನಾನಾ ವಿಧದಲ್ಲಿ ಬೇಡಿದ್ದರು. ಅದರಲ್ಲೂ ದೇವಿಯನ್ನು ತಾಯಿಯೆಂದೇ ಸಂಭೋದಿಸಿ ಆನಂದ ಪಟ್ಟಿದ್ದರು.

ಶ್ಯಾಮಶಾಸ್ತ್ರಿಗಳು ತಿರುವಾರೂರಿನಲ್ಲಿ ಜನಿಸಿದರು. ತಂದೆ ವಿಶ್ವನಾಥ ಅಯ್ಯರ್‍. ವೆಂಕಟಸುಬ್ರಹ್ಮಣ್ಯನೆಂದು ಮಗುವಿಗೆ ನಾಮಕರಣ ಮಾಡಿದರು. ಮುದ್ದಿನಿಂದ ಶ್ಯಾಮಕೃಷ್ಣನೆಂದು ಮಗುವನ್ನು ಕರೆಯುತ್ತಿದ್ದರು. ಮುಂದೆ ಶ್ಯಾಮಶಾಸ್ತ್ರಿಗಳೆಂಬ ಹೆಸರೇ ಜನಜನಿತವಾಗಿ ಉಳಿಯಿತು. ಶ್ಯಾಮಶಾಸ್ತ್ರಿಗಳು ವೇದಾಧ್ಯಯನ, ವ್ಯಾಕರಣ, ಛಂದಸ್ಸು, ಸಾಹಿತ್ಯ ಮುಂತಾದ ಶಾಸ್ತ್ರಗಳಲ್ಲಿ ಪಾರಂಗತರು. ಸಂಗೀತವನ್ನು ತಮ್ಮ ಸೋದರಮಾವನಿಂದ ಕಲಿತರು.

ಯೋಗಿಗಳಾದ ಸಂಗೀತ ಸ್ವಾಮಿಗಳು ಅಗಿಂದಾಗ್ಗೆ ವಿಶ್ವನಾಥ ಅಯ್ಯರ್‍ ಅವರನ್ನು ಭೇಟಿ ಮಾಡಲು ಬರುತ್ತಿದ್ದರು. ವರ್ಚಸ್ವಿಯಾದ ಬಾಲಕನನ್ನು ನೋಡಿ ಸಂತೋಷಿಸಿ, ಸಂಗೀತದಲ್ಲಿ ಉನ್ನತ ಶಿಕ್ಷಣವನ್ನು ನೀಡಲು ಒಪ್ಪಿಗೆಯನ್ನಿತ್ತರು. ಇದಲ್ಲದೇ ಶ್ರೀವಿದ್ಯಾಮಂತ್ರವನ್ನು ಬಲಕನಿಗೆ ಉಪದೇಶಿಸಿದರು. ಗುರುಗಳ ಆಶ್ರಯದಲ್ಲಿ ಶ್ಯಾಮಶಾಸ್ತ್ರಿಗಳು ಸಂಗೀತದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದರು. ರಾಗಾಲಾಪನೆ, ರಾಗ, ತಾನ, ಪಲ್ಲವಿಗಳಲ್ಲಿ ಪ್ರಾವಿಣ್ಯತೆಯನ್ನು ಪಡೆದರು. ಸಂಗೀಟದಲ್ಲಿ ಹಿರಿಯ ವಾಗ್ಗೇಯಕಾರರೆನಿಸಿ, "ಶ್ಯಾಮಕೃಷ್ಣ" ಎಂಬ ಅಂಕಿತನಾಮದಲ್ಲಿ ಅನೇಕ ಸ್ವರಜತಿ, ವರ್ಣಾ, ಕೃತಿಗಳನ್ನು ರಚಿಸಿದರು. ಇವರ ಕೃತಿಗಳು ಹೆಚ್ಚಾಗಿ ತೆಲುಗು ಭಾಷೆಯಲ್ಲಿದ್ದರೂ ಸಂಸ್ಕೃತ ಹಾಗೂ ತಮಿಳಿನಲ್ಲೂ ಕೆಲವು ಕೃತಿಗಳು ರಚಿತವಾಗಿವೆ. ತಾಳಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ ಇವರು, ನೂರೆಂಟು ತಾಳಗಳನ್ನೂ ಅಭ್ಯಾಸ ಮಾಡಿದ್ದರು. ಸ್ವರಜತಿಗಳು, ಸಭಾಗಾನದ ರಚನೆಯ ಗುಣಗಳನ್ನು ಒಳಗೊಂಡು, ಸಂಗೀತ ಕಛೇರಿಯಲ್ಲಿ ಇಂದಿಗೂ ನಿರೂಪಿತವಾಗುತ್ತಿವೆ. ಇವರ ರಚನೆಗಳು ಪೂರ್ಣವಾಗಿದ್ದು ಭಕ್ತಿಯಿಂದ ಕೂಡಿವೆ. ಕೆಲವು ಕೃತಿಗಳಲ್ಲಿ ಸ್ವರಸಾಹಿತ್ಯವೂ, ಚಿಟ್ಟೆಸ್ವರಗಳು ಕಂಡುಬರುತ್ತವೆ.

ಇವರು ರಚಿಸಿರುವ ಕೃತಿಗಳಲ್ಲಿ "ಹಿಮಾದ್ರಿ ಸುತೇ ಪಾಹಿಮಾಂ" ಪ್ರಮುಖವಾದದ್ದು. ಈ ಕೃತಿಯನ್ನು ಕಲ್ಯಾಣಿ ರಾಗದಲ್ಲಿ ರಚಿಸಲಾಗಿದೆ... ಈ ಕೃತಿಯನ್ನು "ಹಂಸಗೀತೆ" ಚಿತ್ರದಲ್ಲಿ ಅಳವಡಿಸಲಾಗಿದೆ...

ಪಲ್ಲವಿ: || ಹಿಮಾದ್ರಿ ಸುತೇ ಪಾಹಿಮಾಂ ವರದೇ ಪರದೇವತೆ||
ಅನು ಪಲ್ಲವಿ:|| ಸುಮೇರು ಮಧ್ಯವಾಸಿನಿ ಶ್ರೀ ಕಾಮಾಕ್ಷಿ|| ಹಿಮಾದ್ರಿ||
ಚರಣ: ||ಶ್ಯಾಮಕೃಷ್ಣ ಸೋದರಿ ಗೌರೀ ಪರಮೇಶ್ವರಿ ಗಿರಿಜಾ ನೀಲವೇಣಿ ಕೀರವಾಣಿ ಶ್ರೀ ಲಲಿತೆ|| ಹಿಮಾದ್ರಿ||


ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್]

Thursday, October 16, 2008

ಗೋಕಾಕ ಪ್ರವಾಸ...

ವಿನೋದನ ಮದುವೆ

ವಿನೋದ weds ರೀನಾ

ದಿನಾಂಕ: ೪-೧೨-೨೦೦೭

ಸ್ಥಳ: ಸಮುದಾಯ ಭವನ, ಗೋಕಾಕ

ಗುಂಪು-೧: ನಾಗರಾಜ, ಸಂಧ್ಯಾ(ಶ್ರೀಮತಿ ನಾಗರಾಜ), ರಾಘು, ಶರತ್, ಪ್ರವೀಣ(ಟಿಂಕು) ಮತ್ತು ನಾನು(ಅನಿಲ್).

ಗುಂಪು-೨: ಶಂಕರ, ಮಾನಸ (ಶ್ರೀಮತಿ ಶಂಕರ), ಸಂತೋಷ, ಮಯೂರಿ (ಶ್ರೀಮತಿ ಸಂತೋಷ), ರಾಮ, ಅಶೋಕ.

ದಿನಾಂಕ: ೩೦-೧೧-೨೦೦೭

ವಿನೋದನಿಗೆ ಅವನ ಮದುವೆ ಎರಡು ದಿನದ ಕಾರ್ಯಕ್ರಮವಾದರೆ, ನಮಗೆ (ಅಂದರೆ ಗುಂಪು - ೧) ನಾಲ್ಕು ದಿನದ ಸುಧೀರ್ಘ ಹಾಗೂ ಹೆಕ್ಟಿಕ್ ಪ್ರೊಗ್ರಾಮ್.

ಮೊದಲೇ ನಿರ್ಧರಿಸಿದಂತೆ ನಾವುಗಳು (ಸಂಧ್ಯಾ ಅವರನ್ನು ಹೊರತುಪಡಿಸಿ) ದಿನಾಂಕ ೩೦-೧೧-೨೦೦೭, ಅಂದರೆ, ಶುಕ್ರವಾರದಂದು ಬೆಂಗಳೂರಿನಿಂದ ಧಾರವಾಡಕ್ಕೆ ೨೧:೧೫ ರ ರಾಣಿ ಚೆನ್ನಮ್ಮ ರೈಲನ್ನ್ನೇರಿದೆವು. ಮೂರನೇ ದರ್ಜೆಯ ಹವಾನಿಯಂತ್ರಿತ (೩ ಟಯರ್ ಎ ಸಿ) ಬೋಗಿಯಲ್ಲಿ ಸ್ಥಳವನ್ನು ಕಾದಿರಿಸಲಾಗಿತ್ತು (ಟಿಕೆಟ್ ಗಳ ಕೃಪೆ: ರಾಘು). ಸಂಧ್ಯಾ ಅವರು ಎರಡು ಮೂರು ದಿನ ಮೊದಲೇ ಸವದತ್ತಿಗೆ ಪ್ರಯಾಣ ಬೆಳೆಸಿ ಅವರ ತಾಯಿಯ ತವರು ಮನೆಯಲ್ಲಿ ತಂಗಿದ್ದರು. ನಾಗರಾಜ ನಮ್ಮ ಜೊತೆ ಇದ್ದಿದ್ದರಿಂದ ನಾವುಗಳು ಸವದತ್ತಿಗೆ ಹೋಗುವುದು ಅನಿವಾರ್ಯವಾಗಿತ್ತು Smiling. ರೈಲಿನಲ್ಲಿ ವಾತಾವರಣ ಆರಾಮದಯಕ. ಹರಟೆ, ಫೋಟೋ ಸೆಶನ್ ಮಾಡುತ್ತಾ ಕಾಲ ಕಳೆದದ್ದೆ ಗೊತ್ತಾಗಲಿಲ್ಲ. ನಾಗರಾಜರಿಗೆ ಹೊಟ್ಟೆ ಹಸಿವು (ಕೃಪೆ: ಹೆಂಡತಿ ಊರು ಸೇರಿದ್ದು), ಹಾಗಾಗಿ ರೈಲು ತುಮಕೂರಿಗೆ ಬಂದಾಗ ಎಲ್ಲರಿಗೂ ಬಿಸಿ ಇಡ್ಲಿ ವಡೆ ತರಿಸಿದೆವು(ಕಂಪನಿ ಕೊಡದೆ ಇರಕ್ಕೆ ಆಗಲ್ಲ ನೋಡಿ)Smiling. ಸಮಯ ರಾತ್ರಿ ೧೦.೪೫. ಹೊಟ್ಟೆಗೆ ಬಿಸಿ ಬಿಸಿ ಇಡ್ಳಿ ವಡೆ ಬಿದ್ದ ಮೇಲೆ ಹರಟೆಗೆ ಹುರುಪು ಬಂದು ಚೆನ್ನಾಗಿ ಟೈಮ್ ಪಾಸ್ ಆಗ್ತಾ ಇತ್ತು. ಆದರೆ ೧೧.೩೦ ರ ಸುಮಾರಿಗೆ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ಮಹಾನುಭಾವರೊಬ್ಬರು, ಡಿಸ್ಟರ್ಬ್ ಆಗ್ತಾ ಇದೆ, ಲೈಟ್ ಆಫ್ ಮಾಡಿ ಮಲ್ಕೊಳ್ಳಿ ಅಂದಾಗ ಬೇರೆ ದಾರಿ ಕಾಣದೆ ನಾವೂ ಮಲಗಿದೆವು... Sad

ದಿನಾಂಕ: ೧-೧೨-೨೦೦೭

ರೈಲು ಧಾರವಾಡವನ್ನು ತಲುಪಿದಾಗ ಬೆಳಿಗ್ಗೆ ಸುಮಾರು ೬:೧೫ ರ ಸಮಯ... ಸಂಧ್ಯಾ ಅವರು ನಮ್ಮನ್ನು ಸವದತ್ತಿಗೆ ಕರೆತರಲು ಕಳುಹಿಸಿದ್ದ ಟೆಂಪೋ ಕ್ರೂಸರ್ (cruiser)ನ ಡ್ರೈವರ್ ಖಸೀಮ (ಖಾಸಿಮ್) ನಮಗಾಗಿ ಕಾಯುತ್ತಿದ್ದ. ನಾವು ಕ್ರೂಸರ್ ನಲ್ಲಿ ಹತ್ತಿ ಸವದತ್ತಿ ಕಡೆಗೆ ಹೊರೆಟೆವು... ದಾರಿಯಲ್ಲಿ ಬಿಸಿ ಬಿಸಿ ಚಹಾ ಕುಡಿದು ಬೆಳಗ್ಗಿನ ಸುರ್ಯೋದಯದ ಫೋಟೋ ತೆಗೆದುಕೊಂಡೆವು. ಸೂರ್ಯೋದಯ...

ಖಾಸೀಮನ ಡ್ರೈವಿಂಗ್ ಸ್ಕಿಲ್ಸ್ ಬಗ್ಗೆ ಹೇಳಲೇ ಬೇಕು. Always One Leg on the Accelerator & Do Not Hit Below 100km... ಅದು ನಿಜವಾಗಿಯೂ ಕ್ರೂಸರ್ Smiling. ನಾವು ಸವದತ್ತಿಯಲ್ಲಿ ಸಂಧ್ಯಾ ಅವರ ಅಜ್ಜಿ ಮನೆಯನ್ನು ತಲುಪಿದಾಗ ಸಮಯ ೭:೩೦. ಈ ಮಧ್ಯ ಕೆಲ ದಿನಗಳಿಂದ ದೂರವಿದ್ದ ಸಂಧ್ಯಾ ನಾಗರಾಜ ದಂಪತಿಗಳ ಮುಖದಲ್ಲಿ ಒಂದು ತರಹದ ಕಳೆ ಎದ್ದು ಕಾಣುತ್ತಿತ್ತು. ಮತ್ತೆ ಅವರ ಮನೆಯಲ್ಲಿ ಚಹಾ /ಕಾಫಿ ಕುಡಿದೆವು. ಅಂದು ಅವರ ಮನೆಯಲ್ಲಿ ಸಂತರು ಬರುವ ಕಾರ್ಯಕ್ರಮ ಇದ್ದುದರಿಂದ ಮನೆಯವರೆಲ್ಲ ಅದಕ್ಕಾಗಿ ತಯಾರಿ ನಡೆಸಿದ್ದರು. ನಮಗೆ ಹೋಟೆಲ್ ಶಿವಾನಿಯಲ್ಲಿ ಸ್ನಾನದ ವ್ಯವಸ್ಥೆ ಮಾಡಲಾಗಿತ್ತು.

ನಾವು ಸ್ನಾನ ಮುಗಿಸಿ ೯.೩೦ ರ ಸುಮಾರಿಗೆ ಸಂಧ್ಯಾರವರ ಅಜ್ಜಿ ಮನೆಗೆ ಬಂದೆವು. ಎಲ್ಲರೂ ಸಂತರ ಆಗಮನಕ್ಕಾಗಿ ಕಾಯುತ್ತಿದ್ದರು. ಮನೆಗೆ ಬಂದ ಅಳಿಯ ನಾಗರಾಜರಿಗೆ ಸ್ಪೆಷಲ್ ಡ್ರೆಸ್ ಹಾಕುವಂತೆ ಪತ್ನಿಯಿಂದ ಇಂದ ಆದೇಶ. ಹೆಂಡತಿ ಆದೇಶ ಪಾಲಿಸಲೇಬೇಕಲ್ವೇ. ಮೀರುವುದಕ್ಕೆ ಆಗುತ್ಯೇ? ಅದರಂತೆ ನಾಗರಾಜ ಟಿಪಿಕಲ್ ನಾರ್ತ್ ಕರ್ನಾಟಕ ಶೈಲಿಯಲ್ಲಿ, ತಲೆ ಮೇಲೆ ಟೋಪಿ ಇಟ್ಕೊಂಡು ಪಂಚೆ ಕಟ್ಟಿಕೊಂಡರು. ನಂತರ ಸಂತರ ಆಗಮನ. ಮನೆಯವರೆಲ್ಲರೂ ಸೇರಿ ಪೂಜೆ ಮಾಡಲಾರಂಭಿಸಿದರು. ಸಂಧ್ಯಾ-ನಾಗರಾಜ ಕೂಡ ಕೈ ಜೋಡಿಸಿದರು. ನಂತರ ಸಂತರಿಂದ ಭಜನೆ ಕಾರ್ಯಕ್ರಮ ಇದ್ದುದರಿಂದ ನಾವು ಸವದತ್ತಿ ಎಲ್ಲಮ್ಮ ಗುಡ್ಡ ನೋಡಿಬರಲು ಹೊರಟೆವು.

ಶನಿವಾರ ಆದ್ದರಿಂದ ಎಲ್ಲಮ್ಮನ ಗುಡ್ಡದಲ್ಲಿ ಜನ ಜಂಗುಳಿ ಇರಲಿಲ್ಲ (ಮಂಗಳವಾರ ಮತ್ತು ಶುಕ್ರವಾರದಂದು ವಿಪರೀತ ಜನ ಇರುತ್ತಾರಂತೆ). ಎಲ್ಲಮ್ಮನ ದರ್ಶನ ಪಡೆದು ಕೆಲ ಛಾಯಾಚಿತ್ರಗಳನ್ನು ತೆಗೆದುಕೊಂಡು ಪರ್ಯಾಯ ಮಾರ್ಗವಾಗಿ ಮನೆ ಕಡೆ ಹೊರಟೆವು. ದಾರಿಯಲ್ಲಿ ಬೆಟ್ಟದ ಮೇಲಿಂದ ಮಲಪ್ರಭಾ ಡ್ಯಾಮ್ ನ ಹಿನ್ನೀರಿನ ದೃಶ್ಯವನ್ನು ನೋಡಿ, ಸ್ವಲ್ಪ ಸಮಯ ಅಲ್ಲಿ ಕಾಲ ಕಳೆದು ಮನೆಗೆ ಬರುವ ಹೊತ್ತಿಗೆ ೧೧:೩೦ ಆಗಿತ್ತು. ನಂತರ ಉಪ್ಪಿಟ್ಟು ತಿಂದು ಬೇಗನೆ ಬಾದಾಮಿಗೆ ಹೊರಡುವ ತರಾತುರಿ. ಆದರೆ ಅಳಿಯ ನಾಗರಾಜ ಮತ್ತು ಮೊಮ್ಮಗಳು ಸಂಧ್ಯಾ ಎಲ್ಲರಿಗೂ (ಬಗ್ಗಿ) ನಮಸ್ಕಾರ ಮಾಡಿ ಹೊರಡುವ ಹೊತ್ತಿಗೆ ೧:೦೦ ಘಂಟೆ. ಸಂಧ್ಯಾಳ ಅಮ್ಮ ಮತ್ತು ತಮ್ಮ ನಮ್ಮ ಜೊತೆ ಜೀಪನ್ನೆರಿದರು (ಕ್ರೂಸರ್). ಅವರು ದಾರಿಯಲ್ಲಿ ಇಳಿದು ಬಾಗಲಕೊಟೆಗೆ ಹೋಗುವರಿದ್ದರು...

ಬಾಗಲಕೋಟೆ ಇಂದ ಬಾದಾಮಿಗೆ ಸುಮಾರಾಗಿ ೯೦ ಕಿ.ಮೀ. ದೂರ. ಅಷ್ಟೇನೂ ಉತ್ತಮವಲ್ಲದ ರಸ್ತೆ ಆದ್ದರಿಂದ ನಾವು ಸುಮಾರು ೩:೦೦ ರ ಹೊತ್ತಿಗೆ ಬಾದಾಮಿ ತಲುಪ ಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಡ್ರೈವ್ ಮಾಡುತ್ತಿದ್ದುದು ಯಾರು??? ಖಾಸಿಮ್. ಹಾಗಾಗಿ ೨.೦೦ ರ ಹೊತ್ತಿಗೆ ನಾವು ಬಾದಾಮಿ ತಲುಪಿದೆವು. ಬಾದಾಮಿಯಲ್ಲಿ ಗುಹಾಂತರ ದೇವಾಲಯ ನೋಡಲು ನಾಗರಾಜ ಟಿಕೆಟ್ ತೆಗೆದುಕೊಂಡು ಬಂದರು... ಇಮ್ಮಡಿ ಪುಲಿಕೇಶಿಯ ಕಾಲದ ಈ ಗುಹಾಂತರ ದೇವಾಲಯಗಳನ್ನು ನೋಡಿ ಆಶ್ಚರ್ಯ ಚಕಿತರಾಗದವರಿಲ್ಲ ... ಒಂದೇ ಒಂದು ಪದದಲ್ಲಿ ಹೇಳುವದಾದರೆ "ಅದ್ಭುತ". ಬಾದಾಮಿ

ಈ ಗುಹಾಂತರ ದೇವಾಲಯವು ಕಲ್ಲಿನ ಒಂದು ಬೆಟ್ಟದಲ್ಲಿ ಕಡೆಯಲ್ಪಟ್ಟಿದೆ.. ಈ ದೇವಾಲಯವಿರುವ ಗುಡ್ಡದ ಪಕ್ಕದಲ್ಲೇ (ಕೆಳಗೆ) ಒಂದು ಕೆರೆ ಇದೆ. ಬಾದಾಮಿ

ಎಲ್ಲರೂ, ಎಲ್ಲಾ ರೀತಿಯ (ಸೋಲೋ, ಗ್ರೂಪ್, ಕಪಲ್ etc) ಫೋಟೊಗಳಿಗೆ ಪೋಸ್ ನೀಡಿದರು .... ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡು ಕೆಳಗೆ ಬರುವ ಹೊತ್ತಿಗೆ ೩:೩೦ .. ನಂತರ ಖಾನಾವಳಿಯಲ್ಲಿ ಸಕ್ಕತ್ ಖಾರದ ಊಟ. ಸಂಧ್ಯಾರವರು ಸಜ್ಜಿ ರೊಟ್ಟಿ ಊಟ ಗಡದ್ ಆಗಿ ಹೊಡೆದರು. ಊಟ ಮುಗಿಸಿ ಹೊರಗೆ ಬಂದಾಗ ಕಣ್ಣಿಗೆ ಬಿದ್ದಿದ್ದು ಎಳನೀರು... ಖಾರ ಕಡಿಮೆ ಮಾಡಲು ಎಳನೀರಿನ ಸೇವನೆ.

ಬಾದಾಮಿ ಇಂದ ೫ ಕಿ ಮೀ ದೂರವಿರುವ ಬನಶಂಕರಿಗೆ ಪ್ರಯಾಣ. ದೇವಸ್ಥಾನದಲ್ಲಿ ಅಮ್ಮನವರ ದರ್ಶನ ಮಾಡಿ ೪.೩೦ ರ ಹೊತ್ತಿಗೆ ೧೦ ಕಿ ಮೀ ದೂರದ ಮಹಾಕೂಟಕ್ಕೆ ಹೊರಟೆವು.. ಮಹಾಕೂಟ ಒಂದು ತಂಪಾದ ಸ್ಥಳ.. ಇಲ್ಲಿ ಬೆಟ್ಟದ ನಡುವೆ ಒಂದು ದೇವಸ್ಥಾನವಿದ್ದು, ದೇವಸ್ಥಾನದ ಪಕ್ಕದಲ್ಲಿ ಒಂದು ಕೊಳ (ಕಲ್ಯಾಣಿ) ಇದೆ. ಕೊಳದ ತಳದಲ್ಲಿ ಒಂದು ರೀತಿಯ ದ್ವಾರವಿದ್ದು ಅಲ್ಲಿಂದ ಒಂದು ಸಣ್ಣ ಲಿಂಗವಿರುವ ದೇವಾಲಯವನ್ನು ಪ್ರವೇಶಿಸಬಹುದು. ರಾಘು ಮತ್ತು ನಾಗರಾಜ ನೀರಿನಲ್ಲಿ ಮುಳುಗಿ ದೇವಸ್ಥಾನ ನೋಡಲು ಮುಂದಾದರು.. ಮಹಾಕೂಟ... ನಾಗರಾಜ ನೀರಿನಲ್ಲಿ ಮುಳುಗಿ ದ್ವಾರದ ಮೂಲಕ ದೇವಸ್ಥಾನ ಪ್ರವೇಶಿಸಿದರು . ರಾಘು ಕೂಡ ಸ್ವಲ್ಪ ಪ್ರಯಾಸಪಟ್ಟು ದೇವಸ್ಥಾನ ನೋಡಲು ಸಾಧ್ಯವಾಯಿತು. ಈ ನೀರಿನ ಕೊಳದ ತಳದಿಂದ ನೀರಿನ ಗುಳ್ಳೆಗಳು ಏಳುತ್ತಿದ್ದವು ಮತ್ತು ನೀರು ಬೆಚ್ಹಗಿತ್ತು. ಮಹಾಕೂಟದಿಂದ ಪಟ್ಟದಕಲ್ಲಿಗೆ ಹೋದೆವು. ಇಲ್ಲಿ ಉದ್ಯಾನದ ನಡುವೆ ಸುಂದರ ಸಣ್ಣ ಪುಟ್ಟ ದೇವಾಲಯಗಳಿವೆ. ಈ ದೇವಾಲಯಗಳು ಸುಮಾರು ೧೨೦೦ ವರ್ಷಗಳಷ್ಟು ಹಳೆಯವು. ದೇವಾಲಯಗಳು ಭಗ್ನಗೊಂಡಿದ್ದರೂ ನೋಡಲು ಸುಂದರವಾಗಿ, ಆಕರ್ಷಣೀಯ ವಾಗಿದೆ. ಪಟ್ಟದಕಲ್ಲಿನಿಂದ ಐಹೊಳೆ ಕಡೆಗೆ ಹೊರಟೆವು . ಆದರೆ ಸಮಯ ಆಗಲೇ ೬:೩೦ ಆದ್ದರಿಂದ ಐಹೊಳೆ ನೋಡಲು ಸಾಧ್ಯವಾಗಲಿಲ್ಲ. ನಮ್ಮ್ದಮುಂದಿನ ಲಕ್ಷ್ಯ ಬಾಗಲಕೋಟೆ. ಐಹೊಳೆ ಇಂದ ಸುಮಾರು ೪೦ ಕಿ ಮೀ ದೂರ... ಈ ದೂರವನ್ನು ಕ್ರಮಿಸಿ ಬಾಗಲಕೋಟೆ ತಲುಪುವ ಹೊತ್ತಿಗೆ ರಾತ್ರಿ ೭:೧೫ ಆಗಿತ್ತು.

ಬಾಗಲಕೋಟೆಯಲ್ಲಿ ಸಂಧ್ಯಾರವರ ದೊಡ್ಡಪ್ಪನ (ಕಾಕಾ & ಕಾಕೂ) ಮನೆಗೆ ಹೋದೆವು .ಆ ಸಮಯಕ್ಕೆ ಸವದತ್ತಿ ಇಂದ ನಮ್ಮ ಜೊತೆ ಹೊರಟಿದ್ದ ಸಂಧ್ಯಾಳ ತಾಯಿ ಮತ್ತು ತಮ್ಮ ಅಲ್ಲಿದ್ದರು. ನಾವು ಅವರ ಮನೆಯಲ್ಲಿ ಚಹಾ ಕುಡಿದು ಹೋಟೆಲ್ ದುರ್ಗಾವಿಹಾರ ದಲ್ಲಿ ಚೆಕ್ ಇನ್ ಮಾಡಿದೆವು. ಈ ಹೋಟೆಲ್ ಏನೋ ಹೇಳ್ತಾರಲ್ಲ , "ಹೊರಗೆಲ್ಲ ಥಳಕು, ಒಳಗೆ ಬರೀ ಹುಳುಕು" ಆ ತರಹ . ಅಲ್ಲಿ ಒಂದು ಗಂಟೆ ಕಾರ್ಡ್ಸ್ (judgement) ಆಡಿದೆವು.. ಆಟ ಸ್ವಲ್ಪ ಹೊಸತು ಆದ್ದರಿಂದ ಎಲ್ಲರಿಗೂ ಅದನ್ನು ಕಲಿಯುವ್ದಕ್ಕೆ ಸ್ವಲ್ಪ ಸಮಯ ಹಿಡಿಯಿತು. ಸುಮಾರು ೯.೦೦ ರ ಹೊತ್ತಿಗೆ ಸಂಧ್ಯಾರವರ ದೊಡ್ಡಪ್ಪನ ಮನೆಗೆ ಹೋದೆವು.ಅಲ್ಲಿ ಊಟದ ಪ್ರೊಗ್ರಾಮ್. ರಾಯಲ್ ಊಟ, ಚಪಾತಿ, ಪಲ್ಯ, ಸಾರು ಮತ್ತು ಗುಲಾಬ್ ಜಾಮೂನ್.
ಎಲ್ಲರೂ ಸಕ್ಕತ್ತಾಗಿ ಬ್ಯಾಟಿಂಗ್ ಮಾಡಿದೆವು. ಸುಮಾರು ೧೦:೦೦ ರ ಹೊತ್ತಿಗೆ ಹೋಟೆಲ್ ಗೆ ಬಂದೆವು. ನಂತರ ಕಾರ್ಡ್ಸ್ ಆಟ ಶುರು... ಸುಮಾರು ೨:೦೦ ಗಂಟೆ ವರೆಗೂ ನಾನ್ ಸ್ಟಾಪ್ ಆಟ. ಪ್ರವೀಣ ಭರ್ಜರಿ ಆಟ ಆಡಿ ಎಲ್ಲರನ್ನೂ ಮೀರಿಸಿಬಿಟ್ಟ. ಶಬ್ಹಾಶ್ ಪ್ರವೀಣ (ಅಲಿಯಾಸ್ ಟಿಂಕು)....... ಈ ದಿನದ schedule, hectic ಆಗಿತ್ತು. ಅರ್ಧ ದಿನದಲ್ಲಿ ಸುಮಾರು ೧೫೦ ಕಿ ಮೀ ನಷ್ಟು ಸುತ್ತಾಟ... ಸಾಕಷ್ಟು ಜಾಗಗಳ ವೀಕ್ಷಣೆ... ಮಲಗಿದ ತಕ್ಷಣ ನಿದ್ರೆ...
ಎಚ್ಚರ ಆದಾಗ ಬೆಳಿಗ್ಗೆ ೭.೩೦.

ದಿನಾಂಕ : ೨-೧೨-೨೦೦೭

ಹಿಂದಿನ ದಿನ ಸಾಕಷ್ಟು ಸುತ್ತಾಟ ಆಗಿದ್ದರಿಂದ, ಆ ದಿನ ಆದಷ್ಟೂ relax ಮಾಡುವ ಪ್ಲಾನ್ ಇತ್ತು.

ನೋಡಬೇಕಾದ ಸ್ಥಳಗಳು ಎರಡೇ:

೧) ಕೂಡಲಸಂಗಮ.

೨)ಆಲಮಟ್ಟಿ.

ಒಟ್ಟು ದೂರ: ಸುಮಾರು ೧೦೦ ಕಿ. ಮೀ.

ಸಂಧ್ಯಾಳ ದೊಡ್ಡಪ್ಪನ ಮನೆಯವರು ಅವರ ಮನೆ ದೇವರನ್ನು ನೋಡಲು ಬೆಳಿಗ್ಗೆ ಬೇಗನೆ ಹೊರಡುವವರಿದ್ದರು. ನಾವುಗಳು ಸ್ನಾನ ಮುಗಿಸಿ ರೆಡಿ ಆಗುವ ಹೊತ್ತಿಗೆ ೮:೩೦. ಆ ಹೊತ್ತಿಗೆ ಸಂಧ್ಯಾ ನಮಗೆ ಮಧ್ಯಾನ್ಹದ ಊಟ ತಂದು ಕೊಟ್ಟು ಹೋದರು. ಬೆಳಿಗ್ಗೆ ಅಷ್ಟು ಹೊತ್ತಿಗೆ ಚಪಾತಿ,ಪಲ್ಯ, ಚಿತ್ರಾನ್ನ, ಮೊಸರನ್ನದ ಊಟ ರೆಡಿ ಮಾಡಿ, ಕಟ್ಟಿ (pack maadi) ಕಳುಹಿಸಿದ್ದರು.

ನಾವು ೮.೩೦ ರ ಹೊತ್ತಿಗೆ ಬಾಗಲಕೋಟೆ ಇಂದ ಕೂಡಲಸಂಗಮ ದತ್ತ ಹೊರಟೆವು. ಬಾಗಲಕೋಟೆಯ ನವನಗರದ ಹೋಟೆಲೊಂದರಲ್ಲಿ ಭರ್ಜರಿ ಬ್ರೇಕ್ ಫಾಸ್ಟ್.. ಕೂಡಲಸಂಗಮ ಸುಮಾರು ೪೫ ಕಿ ಮೀ ದೂರ. ದಾರಿಯಲ್ಲಿ ಸುಂದರ ಸೂರ್ಯಕಾಂತಿ ಹೊಲಗಳು... ಫೋಟೋ ಸೆಶನ್ ಬಗ್ಗೆ ಹೇಳಬೇಕಿಲ್ಲ.... Eye-wink.

ಸುಮಾರು ೧೦.೧೫ ರ ಹೊತ್ತಿಗೆ ಕೂಡಲ ಸಂಗಮ ತಲುಪಿದೆವು.

ಕೂಡಲಸಂಗಮದಲ್ಲಿ...

ಇದು ೩ ನದಿಗಳ ಸಂಗಮ ಸ್ಥಳ (ಕೃಷ್ಣ, ಮಲಪ್ರಭ ಹಾಗೂ ಘಟಪ್ರಭಾ) ಹಾಗೂ ಬಸವಣ್ಣನವರು ಐಕ್ಯವಾದ ಸ್ಥಳ. ಐಕ್ಯ ಸ್ಥಳ (ಲಿಂಗ)ವು ನೀರಿನ ಮಧ್ಯದಲ್ಲಿದೆ. ಅದನ್ನು ನೋಡಲು ಅನುಕೂಲವಾಗುವಂತೆ ಒಂದು ಸುಂದರ ಸೇತುವೆ ನಿರ್ಮಿಸಿದ್ದಾರೆ. ಸೇತುವೆ ದಾಟಿ , ಮೆಟ್ಟಿಲುಗಳ ಮೂಲಕ ಕೆಳಗಿಳಿದು ಲಿಂಗ ನೋಡಲು ಹೋಗಬೇಕು. ಅದೇ ಸ್ಥಳದಲ್ಲಿ ಮೇಲೆ ನಿಂತು ನೋಡಿದರೆ ಅಪಾರ ಜಲರಾಶಿ... ಪ್ರವೀಣನಿಗೆ ಶಿವನಸಮುದ್ರ. ಅವನು ಯಾಕೆ ಆ ರೀತಿ ಹೇಳ್ದ ಅಂತ ಇನ್ನೂ ಅರ್ಥ ಆಗಿಲ್ಲ... Laughing out loud

ಲಿಂಗದ ದರ್ಶನ ಪಡೆದು , auditorium ಗೆ ಹೋದೆವು. ವಿಶಾಲವಾದ ಇದರಲ್ಲಿ ಸುಮಾರು ೩೫೦೦ ಜನ ಕೂಡ ಬಹುದಾಗಿದೆ. ನಂತರ ೨೫ ಕಿ ಮೀ ದೂರದ ಆಲಮಟ್ಟಿಗೆ ಪ್ರಯಾಣ. ಶರತ್ ೨೨ ವರ್ಷಗಳ ಹಿಂದೆ ಇದ್ದ ಮನ, ಕಲಿತ ಶಾಲೆ ನೋಡಿ ಅವನಿಗೆ "ಏನೋ ಒಂಥರಾ ....... ",ಅಲ್ಲಿ ಅವನ ಕಪ್ಪು ಬಿಳುಪು ಫೋಟೋ ಶೂಟ್.

ಆಲಮಟ್ಟಿಯಲ್ಲಿ ಶರತ್...

ಸಮಯ ಸುಮಾರು ೧.೦೦. ನಂತರ ಆಲಮಟ್ಟಿ ಡ್ಯಾಮ್ ಹಾಗೂ ಪಾರ್ಕ್ ನೋಡುವ ಸಮಯ.. ಸ್ವಲ್ಪ ಹೊತ್ತು ಪಾರ್ಕಿನಲ್ಲಿ ಸುತ್ತಾಟ... ಆಲಮಟ್ಟಿ

ಮಧ್ಯಾಹ್ನ ೨:೦೦ ರ ಹೊತ್ತಿಗೆ ಊಟಕ್ಕೆ ಕೂತೆವು.. ಹೊಟ್ಟೆ ಬಿರಿಯುವಷ್ಟು ತಿಂದರೂ ಡಬ್ಬಿಗಳು ಖಾಲಿ ಆಗಲಿಲ್ಲ.. ಹಾಗೂ ಹೀಗೂ ಊಟ ಮುಗಿಸಿ ಮತ್ತಷ್ಟು ಸುತ್ತಾಡಿ, ಪುನಃ ಬಾಗಲಕೋಟೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಧ್ಯಾ ಅವರ ಕಾಕಾ, ತಮ್ಮ, ಅಪ್ಪ, ಅಮ್ಮ, ಹಾಗು ಉಳಿದವರು ಆಲಮಟ್ಟಿ ಡ್ಯಾಮ್ ನೋಡಲು ಬಂದರು (ಮನೆ ದೇವರ ದರ್ಶನ ಮುಗಿಸಿ).

ಆಲಮಟ್ಟಿ...

ಅವರನ್ನು ಸ್ವಲ್ಪ ಮಾತಾಡಿಸಿ ಬಾಗಲಕೋಟೆಗೆ ಹೊರಟು ಸುಮಾರು ೪.೩೦ ರ ಹೊತ್ತಿಗೆ ದುರ್ಗಾ ವಿಹಾರಕ್ಕೆ ಬಂದೆವು. ಸಂಜೆ ಹಾಗೇ ಬಾಗಲಕೋಟೆ ಸುತ್ತಾಡಿ, ಚಹಾ/ಕಾಫಿ ಕುಡಿದು ೭.೦೦ ರ ಹೊತ್ತಿಗೆ ಕಾರ್ಡ್ಸ್ ಆಡಲು ಕುಳಿತೆವು.... ಯಥಾ ಪ್ರಕಾರ ಪ್ರವೀಣನ ವಿಜಯೋತ್ಸವ ಮುಂದುವರೆದಿತ್ತು. ಒಂದು ಕಾರ್ಡ್ ಬಿಟ್ಟ, ರಾಘು ಅನಲೈಜ್ ಮಾಡ್.... ಆಗಲೇ ಗೊತ್ತಾಗಿದ್ದು ಸತ್ಯ... Smiling ಮುಂದಿನ ಆಟಗಳಲ್ಲಿ ಪ್ರವೀಣ ಕಾರ್ಡ್ ಡ್ರಾಪ್ ಮಾಡಿದಾಗಲೆಲ್ಲ ಎಲ್ಲಾರೂ ಅವನನ್ನ ಗುರಾಯಿಸಿ ಪ್ರಶ್ನೆ ಕೇಳುವುದು ಮಾಮೂಲಿ ಅಯಿತು.. ಜೊತೆಗೆ ಹೊಟ್ಟೆ ಬಿರಿಯುವಷ್ಟು ನಗು...

ಸುಮಾರು ೨೧:೦೦ ರ ಹೊತ್ತಿಗೆ ಮತ್ತೆ ಊಟದ ಕಾರ್ಯಕ್ರಮ... ಭರ್ಜರಿ ಊಟ ಮಾಡಿ ಹೋಟೆಲಿಗೆ ವಾಪಸ್ ಬಂದು ಕಾರ್ಡ್ಸ್ ಆಡಲು ಶುರು ಮಾಡಿದೆವು. ರಾತ್ರಿ ೨:೦೦ ರ ವರಗೆ ನಿಲ್ಲದ ಆಟ.. ಜೊತೆಗೆ ಪ್ರವೀಣನ ಕಾರ್ಡ್ಸ್ ಕಾಮಿಡಿ Smiling
ಈ ನಡುವೆ ಹಿಂದಿನ ದಿನ ರಾತ್ರಿ ನಾಗರಾಜ, ಸಂಧ್ಯಾಳ ದೊಡ್ಡಪ್ಪನ ಮನೇಲಿ ಇರೋದ್ ಬಿಟ್ಟು , ನಮ್ಮ ಜೊತೆ ಹೋಟೆಲ್ನಲ್ಲೇ ಮಲಗಿದ್ದರು.... ಆದ್ದರಿಂದ ಸಂಧ್ಯಾಗೆ ಸಿಟ್ಟು ಬಂದಿತ್ತು.... ಅದನ್ನ ಕಡಿಮೆ ಮಾಡೋಕೆ ನಾಗರಾಜ ಆ ದಿನ ರಾತ್ರಿ ಅವರ ದೊಡ್ಡಪ್ಪನ ಮನೆಯಲ್ಲಿ ಮಲಗುವಂತೆ ಅಯಿತು.... ಗಂಡ ಹೆಂಡಿರ ಜಗಳ ಉಂಡು ಮಲಗೊತನಕ ಅಲ್ವೇ?

ಈ ವೇಳೆಗೆ ಬೆಂಗಳೂರಿನಿಂದ ವಿನೋದ ಮತ್ತು ಅವನ ಮನೆಯವರು ಗೊಕಾಕ್ ಗೆ ಬರಲು ೯:೧೫ ರ ರಾಣಿ ಚೆನ್ನಮ್ಮ ರೈಲನ್ನು ಹಿಡಿದಿದ್ದರು... ಲಾಸ್ಟ್ ಮಿನಿಟ್ ಅಡ್ಜಸ್ಟ್ ಮೆಂಟ್ ಮಾಡಿದ ಮದುವೆ ಗಂಡು ವಿನೋದ ವೈಟಿಂಗ್ ಲಿಸ್ಟ್ ನಲ್ಲಿ Sad ... ಅವನಿಗೆ ಬರ್ತ್ ಖಾಯಂ ಆಗಿ ಅವನು ಮಲಗುವ ಹೊತ್ತಿಗೆ ರಾತ್ರಿ ೧೨:೦೦, ಪಾಪ ಮದುವೆಯಾಗುವ ಮೊದಲೂ ನೆಮ್ಮದಿಯ ನಿದ್ದೆ ಇಲ್ಲ. Eye-wink... ಮಾರನೆಯ ದಿನ ಬೆಳಿಗ್ಗೆ ಸುಮಾರು ೧೧:೦೦ ರ ಹೊತ್ತಿಗೆ ಗೋಕಾಕ ತಲುಪಿದ...

ದಿನಾಂಕ : ೩-೧೨-೨೦೦೭ (ಮದುವೆಯ ಹಿಂದಿನ ದಿನ)

ಈ ದಿನ ನಾವು ಬಾಗಲಕೋಟೆಯಿಂದ ಗೋಕಾಕಿಗೆ ಹೊರಟು ಮದುವೆ ಮನೆ ಸೇರುವ ಕಾರ್ಯಕ್ರಮ....ಅದರಂತೆ ನಾವು ಬೆಳಿಗ್ಗೆ ೮.೩೦ ರ ಹೊತ್ತಿಗೆ ರೆಡಿ ಆಗಿ ಸಂಧ್ಯಾರವರ ದೊಡ್ಡಪ್ಪನ ಮನೆಗೆ ಹೋಗಿ ಅಲ್ಲಿ ತಿಂಡಿ ತಿಂದು, ಹೋಟೆಲಿಗೆ ಬಂದು ಚೆಕ್ ಔಟ್ ಮಾಡಿದೆವು... ಸುಮಾರು ೯:೩೦ ರ ಹೊತ್ತಿಗೆ ಗೋಕಾಕಿಗೆ ಹೋಗಲು, ಬಸ್ ಹಿಡಿಯುವ ಸಲುವಾಗಿ ಬಾಗಲಕೋಟೆ ರೈಲು ನಿಲ್ದಾಣದ ಬಳಿ ಬಂದೆವು.. ಅಲ್ಲಿಂದ ಯರಗಟ್ಟಿಗೆ ಹೋಗುವ ಬೆಳಗಾವಿ ಬಸ್ಸನ್ನು ಹತ್ತಿ ಸುಮಾರು ೧೧:೦೦ ರ ಹೊತ್ತಿಗೆ ಯರಗಟ್ಟಿ ತಲುಪಿದೆವು... ಬಸ್ ಸೂಪರ್ ಫಾಸ್ಟ್... ರೋಡ್ hump ಬಂದರೂ ಸ್ಪೀಡ್ ನಲ್ಲಿ ಯಾವುದೇ ರೀತಿಯ ಇಳಿಕೆ ಇಲ್ಲ.... ಯರಗಟ್ಟಿ ಇಂದ ಗೋಕಾಕ (ಬೆಂಗಳೂರು ಟು ಗೋಕಾಕ) ಬಸ್ ಹಿಡಿದು ಸುಮಾರು ೧೨:೦೦ ರ ಹೊತ್ತಿಗೆ ಗೋಕಾಕ ಬಸ್ ನಿಲ್ದಾಣದಲ್ಲಿ ಇಳಿದಾಗ, ನಮ್ಮನ್ನು ಸ್ವಾಗತಿಸಲು ವಿನೋದ (ಮದುವೆ ಗಂಡು) ಅಲ್ಲಿ ಹಾಜರ್...

ಹೋಟೆಲ್ ಅನಮೊಲ ದಲ್ಲಿ ನಮಗಾಗಿ ೨ ಕೋಣೆಗಳನ್ನು ರಿಸರ್ವ್ ಮಾಡಿದ್ದ ವಿನೋದ... ಅಲ್ಲಿ ಹೋಗಿ ಚೆಕ್ ಇನ್, ಉತ್ತಮವಾದ ರೂಮ್ ಗಳು, ಬಾಗಲಕೋಟೆಗೆ ಹೋಲಿಸಿದರೆ ಇದು ಪಂಚ ತಾರಾ ಹೋಟೆಲ್... ನಂತರ ಅನಮೊಲ ರೆಷ್ಟೊರಂಟ ದಲ್ಲಿ ಊಟ... ಊಟ ಮುಗಿಸಿ ಸೆಟಲ್ ಆಗುವ ಹೊತ್ತಿಗೆ ೩:೦೦ ರ ಸಮಯ .. ಆನಂತರ ಗೋಕಾಕ ಜಲಪಾತ ನೋಡಲು ಹೊರಟೆವು... ಗೋಕಾಕ ಜಲಪಾತಮಳೆಗಾಲದಲ್ಲಾಗಿದ್ದರೆ ಜಲಪಾತ ಬಹಳ ಸುಂದರವಂತೆ... ನೀರಿಲ್ಲದ ಕಾರಣ ಜಲಪಾತ ಅಷ್ಟೇನೂ ಸೊಗಸು ಅನಿಸಲಿಲ್ಲ. ಹೀಗಾಗಿಯೂ ನದಿ ದಾಟಲು ನಿರ್ಮಿಸಿರುವ ತೂಗು ಸೇತುವೆ ಹಾಗೂ ಅಗಲವಾದ, ಕಲ್ಲು ಬಂಡೆಗಳಿಂದ ಕೂಡಿರುವ ನದೀ ಮಾತ್ರ ಸುಂದರವಾಗಿದೆ.... ನಾವು ತೂಗು ಸೇತುವೆ ದಾಟಿ, ಜಲಪಾತದ ಹತ್ತಿರ ಹೋಗಿ, ಬಹಳಷ್ಟು ಫೋಟೋ ತೆಗೆದು ಕೊಂಡೆವು..

ಸುಮಾರು ೪:೩೦ ರ ಹೊತ್ತಿಗೆ ಹೋಟೆಲಿಗೆ ಹೊರಟೆವು.. ಸಾಕಷ್ಟು ಸಮಯ ಇದ್ದುದರಿಂದ ಸಂಜೆ ಯಾವುದಾದರೊಂದು ಸಿನಿಮಾ ನೋಡುವ ಪ್ಲಾನ್ ಮಾಡಿದೆವು... ಆದರೆ ಹಾಗಾಗದೇ, ಸುಮಾರು ೭:೩೦ ರ ಹೊತ್ತಿಗೆ ಮದುವೆ ಮಂಟಪಕ್ಕೆ (ಸಮುದಾಯ ಭವನ) ಹೋದೆವು.. ಅಲ್ಲಿ ಮದುವೆ ಗಂಡನ್ನು ಎದುರುಗೊಳ್ಳುವ (ಹೆಣ್ಣಿನವರು ವಿನೋದನನ್ನು ಬರಮಾಡಿಕೊಳ್ಳುವ) ಕಾರ್ಯಕ್ರಮ... ಅದರ ನಂತರ ಗಂಡು, ಹೆಣ್ಣಿಗೆ ಅರಿಶಿನ ಹಚ್ಚುವ ಕಾರ್ಯಕ್ರಮ... ಎಲ್ಲರೂ ಮದುವೆ ಗಂಡಿಗೆ ಅರಿಶಿನ ಹಚ್ಚಿದ್ದೋ ಹಚ್ಚಿದ್ದು..... ಬ್ಲೀಚ್ ಮಾಡಿಸಿಕೊಂಡ ಅವನ ಮುಖ ಹಳದಿಯಾಗಿತ್ತು... ನಂತರ ಆಂಟಿಯೊಬ್ಬರು ಎಲ್ಲರನ್ನೂ ಓಡಾಡಿಸಿಕೊಂಡು ಅರಿಶಿನ ಹಚ್ಚುತ್ತಿದ್ದನ್ನು ಕಂಡು ಶರತ್ ಮತ್ತು ನಾನು ಅಲ್ಲಿಂದ Escape...
ಶರತ್ ಮತ್ತು ನನ್ನನ್ನು ಬಿಟ್ಟು ಗುಂಪು ೧ ರ ಎಲ್ಲರಿಗೂ ಅರಿಶಿನದ ಲೇಪನ.. ಸ್ವಲ್ಪ ಹೊತ್ತಿನ ನಂತರ ಗಂಡು ಹೆಣ್ಣಿಗೆ ಸ್ನಾನದ ಪ್ರೊಗ್ರಾಮ್... ಹೊರಗಡೆ ಮಣೆ ಹಾಕಿ ತಲೆ ಮೇಲೆ ನೀರು ಸುರಿಯುವುದು... ನಾವು ಒಂದು ಪ್ಯಾಕ್ ಐಸ್ ಅನ್ನು ವಿನೋದನ ಶರ್ಟ್ ಒಳಗೆ ಸುರಿದಾಗ.... ಅವನಿಗೆ "ಚಳಿ ಚಳಿ ತಾಳೆನು ಈ ಚಳಿಯ" ಹಾಡು ಜ್ಞಾಪಕ ಬಂತು ಅಂತ ಆಮೇಲೆ ಹೇಳ್ದ.

ಎಲ್ಲ ಕಾರ್ಯಕ್ರಮ ಮುಗಿದು ಊಟ ಮಾಡುವ ಹೊತ್ತಿಗೆ ೧೦:೦೦ ರ ಸಮಯ.. ನಂತರ ಹೋಟೆಲಿಗೆ ಹೋಗಿ ಮಲಗುವ ಕಾರ್ಯಕ್ರಮ... ಆದರೆ ಶಾಸ್ತ್ರದ ಪ್ರಕಾರ ವಿನೋದ ಮದುವೆ ಮಂಟಪದಲ್ಲೇ ಮಲಗಬೇಕು ಎಂದಾಗ ಅವನ ಮುಖ ಬಾಡಿ ಹೋಗಿತ್ತು.. ನಾಗರಾಜ, ಸಂಧ್ಯಾ ಹಾಗೂ ಪ್ರವೀಣ ಟಾಟಾ indica ಹತ್ತಿ ಹೋಟೆಲ್ ಸೇರಿದರು.. ಶರತ್, ರಾಘು ಹಾಗೂ ನಾನು ಹೋಟೆಲಿಗೆ ಹೋಗಲು ಕಾರ್ ಗಾಗಿ ಕಾಯಿತ್ತಿದ್ದೆವು... ಆಗ ಪ್ರವೀಣನಿಗೆ ಬಿಸ್ಕೆಟ್ ಹಾಕುವ ಸಲುವಾಗಿ ಅವನಿಗೆ ಫೋನ್ ಮಾಡಿ "ನಾವು ಹೋಟೆಲಿಗೆ ಬರಲು ಆಗ್ತ ಇಲ್ಲ , ವಿನೋದನಿಗೆ ಕಂಪನಿ ಕೊಡಲು ಇಲ್ಲೇ ಮಲಗುತ್ತೇವೆ... ನೀನು ನಾಗರಾಜರ ರೂಮ್ ಅಲ್ಲಿ ಅಡ್ಜಸ್ಟ್ ಮಾಡ್ಕೋ" ಅಂತ ಅಂದಾಗ ಪ್ರವೀಣ ಫುಲ್ ರೈಸ್ ಆದ. ಆ ಕಡೆ ಇಂದ ಫೋನ್ ಮಾಡಿದ ಅವನ fiancee ಗೆ ಬೈದೆ ಬಿಟ್ಟ. ಯಾಕೆ ರೈಸ್ ಆದ ಅಂತ ಅರ್ಥ ಆಗ್ಲಿಲ್ಲ. ಪ್ರವೀಣ್ ರೈಸ್ ಆಗಿ ನಾಗರಾಜರ ರೂಮ್ ಗೆ ಹೋಗಿ ಅಲ್ಲಿ ಬಾಗಿಲು ತಟ್ಟಿದಾಗ, ಸಂಧ್ಯಾ ಅವರು ನಾಗರಾಜರಿಗೆ ತಗುಲಿಕೊಂಡರು. ಹಾಕಿದ ಬಿಸ್ಕಿಟ್ ಸೂಪರ್ ಆಗಿ ಕೆಲ್ಸ ಮಾಡಿತ್ತು.

ನಂತರ ನಾವು ಕಾರ್ ಹತ್ತಿ , ಹೋಟೆಲಿಗೆ ಹೋದಾಗ ೨೩:೩೦. ಪ್ರವೀಣನನ್ನು ಕೂಲ್ ಮಾಡಿ... ಶರತ್, ರಾಘು, ನಾನು, ಪ್ರವೀಣ ಕಾರ್ಡ್ಸ್ ಆಡಲು ಕುಳಿತೆವು.. ಬೆಂಡ್ ಎತ್ತಿಸಿಕೊಂಡ ನಾಗರಾಜ same day ಮಲಗುವಂತೆ ಅಯಿತು. ನಮ್ಮ ಕಾರ್ಡ್ಸ್ ಆಟ ಮುಂದುವರೆದಿತ್ತು... ಅಷ್ಟಾಗಿ ಮೂಡ್ನಲ್ಲಿ ಇಲ್ಲದ ಪ್ರವೀಣ ಮಲಗುವ ಯೋಚನೆ ಮಾಡಿದ. ನಡೆದದ್ದನ್ನೆಲ್ಲ ನೆನೆಸಿಕೊಂಡು ಶರತ್, ರಾಘು ಮತ್ತೆ ನಾನು ಹೊಟ್ಟೆ ನೋಯುವಷ್ಟು ನಕ್ಕಿದ್ದೆ ನಕ್ಕಿದ್ದು.. Laughing out loud

ಸಾಕಷ್ಟು ಬಿಸ್ಕಿಟ್ ತಿಂದು ರೈಸ್ ಆಗೊಗಿದ್ದ ಪ್ರವೀಣ ಸ್ವಲ್ಪ ಸಮಯದಲ್ಲೇ ನಿದ್ದೆಗೆ ಜಾರಿದ... ನಾವು ಆಟ ಮುಂದುವರೆಸಿ, ನಕ್ಕೂ ನಕ್ಕೂ ಮಲಗುವ ಹೊತ್ತಿಗೆ ಸಮಯ ೧:೩೦. ಮದುವೆ ಮಂಟಪ ದಲ್ಲಿ ಮಲಗಿದ್ದ ವಿನೋದನಿಗೆ ಸ್ವಾತಂತ್ರ್ಯದ ಕೊನೆಯ ರಾತ್ರಿ ಅಷ್ಟೇನೂ ಆರಾಮದಾಯಕವಾಗಿರಲಿಲ್ಲ...

ಈ ಹೊತ್ತಿಗೆ ಬೆಂಗಳೂರಿನಿಂದ ಗುಂಪು-೨ ಗೋಕಾಕಿಗೆ ಹೊರಟಿತ್ತು... ಅದೇ ರೈಲು... ೨೧:೧೫ ರ ರಾಣಿ ಚೆನ್ನಮ್ಮ..... ನವದಂಪತಿ ಶಂಕರ ಅಂಡ್ ಮಾನಸ, ೨ ಎ ಸಿ ನಲ್ಲಿ ಪ್ರತ್ಯೇಕ ಆಸನ ಕಾದಿರಿಸಿದ್ದರು..... privacy ಬೇಕು ನೋಡಿ.... ಉಳಿದವರೆಲ್ಲ ೩ ಎ ಸಿ ಅಲ್ಲಿ ಪ್ರಯಾಣ...

ದಿನಾಂಕ ೪-೧೨-೨೦೦೭ (ಮದುವೆಯ ದಿನ)

ವಿನೋದ ಕಷ್ಟ ಪಟ್ಟು ರಾತ್ರಿ ಕಳೆದಿದ್ದ... ಬೆಳಿಗ್ಗೆ ಎದ್ದು ತರಾತುರಿಯಲ್ಲಿ ಮದುವೆಗೆ ಸಿದ್ಧನಾಗಿದ್ದ...
ನಾವು ಬೆಳಿಗ್ಗೆ ಎದ್ದು, ರೆಡಿ ಆಗುವ ಹೊತ್ತಿಗೆ ಸಮಯ ೯:೦೦... ಮಹೂರ್ತ ಸುಮಾರು ೯:೩೦ ರ ಸುಮಾರಿಗೆ... ಗುಂಪು-೨ ಸುಮಾರು ೧೧:೦೦ ರ ಹೊತ್ತಿಗೆ ಗೋಕಾಕ ತಲುಪುವ ನಿರೀಕ್ಷೆಯಿತ್ತು.... ನಾವುಗಳು ೯:೧೫ ರ ಸುಮಾರಿಗೆ ಮದುವೆ ಮಂಟಪಕ್ಕೆ ಹೋದವು... ವಿನೋದನ ಸ್ವಾತಂತ್ರ್ಯ ಅಪಹರಣಕ್ಕೆ ವೇದಿಕೆ ಸಿದ್ಧ ವಾಗಿತ್ತು.. ನಾವು ಮದುವೆ ಮಂಟಪ ತಲುಪುತ್ತಲೇ ಮಾಂಗಲ್ಯ ಧಾರಣೆ ನಡೆಯಿತು. ಮೂರು ಗಂಟು ಹಾಕಿದ ವಿನೋದನು ಸ್ವಾತಂತ್ರ್ಯ ಕಳೆದು ಕೊಂಡಿದ್ದ.. Smiling

ದಿನಾಂಕ ೪-೧೨-೨೦೦೭ ಸಮಯ ೯:೩೦..... ಆದರೂ ಮುಖದಲ್ಲಿ ಒಂದು ರೀತಿಯ ಖಳೆ... ಹಿಂದಿನ ದಿನ ಹಚ್ಚಿದ ಅರಿಶಿನದ ಹೊಳಪು ಕಡಿಮೆ ಮಾಡಲು ಮುಖ ತಿಕ್ಕಿ ತಿಕ್ಕಿ ತೊಳೆದ ಪರಿಣಾಮವೋ ಏನೋ? ಬಹಳ ದಿನಗಳ ನಿರೀಕ್ಷೆಯಲ್ಲಿದ್ದ ವಿನೋದನ ಮದುವೆ ಆಗೇ ಹೊಗಿತ್ತು!!!

ಈ ಮಧ್ಯೆ, ೨ ಎ ಸಿ ಯಲ್ಲಿ ಪ್ರಯಾಣ ಮಾಡುತ್ತಿದ್ದ ಶಂಕರ, ಗೋಕಾಕಿಗೆ ಬಂದ ಮೇಲೆ ರೂಮ್ ಹಂಚಿಕೊಳ್ಳುವ ವಿಷಯಕ್ಕೆ ತುಂಬ ತಲೆ ಕೆಡಿಸಿ ಕೊಂಡಿದ್ದ... ಮದುವೆಗೆ ಮುಂಚೆ ಡೈನಾಮಿಕ್ ಅಂಡ್ ರನ್ ಟೈಮ್ ಡಿಶಿಷನ್ ಮೇಕರ್ ಆಗಿದ್ದ ಹುಡುಗ ಹೇಗಾಗೋದ. ಗುಂಪು-೨ ಗೋಕಾಕ ತಲುಪಿ, ಹೋಟೆಲಿಗೆ ಹೋಗಿ ರೆಡಿ ಆಗಿ ಮದುವೆ ಮಂಟಪ್ಪಕ್ಕೆ ಬರುವ ಹೊತ್ತಿಗೆ ೧೨:೦೦ ಹೊಡೆದಿತ್ತು...

ಹರಸಲು ಹೋಗಿದ್ದೆವು ನಾವೆಲ್ಲರೂ

ಎಲ್ಲರೂ ಸೇರಿ ನವವಧುವರರಿಗೆ ಶುಭಾಶಯ ಹೇಳಿದೆವು. ನಂತರ ಊಟದ ಕಾರ್ಯಕ್ರಮ... ಮತ್ತೆ ಖಾರವಾದ ಊಟ Smiling ಮುಗಿಸುವ ಹೊತ್ತಿಗೆ ಸಮಯ ಸುಮಾರು ೨.೩೦... ವಧು-ವರರಿಗೆ ಮತ್ತೊಮ್ಮೆ ಶುಭಾಶಯ ಕೋರಿ ನಡೆದುಕೊಂಡೇ ಹೋಟೆಲಿಗೆ ಹೊರೆಟೆವು... ದಾರಿಯಲ್ಲಿ ಎಲ್ಲರೂ ಪಾಚಕ್ (ಜಲ ಜೀರ) ಹಾಗೂ ಲಿಂಬೂ ಸೋಡಾ ಕುಡಿದು.. ಹೋಟೆಲ್ ಮುಟ್ಟಿದೆವು.. ಸಂಜೆ ೫.೪೫ ರ ಬೆಂಗಳೂರು ರೈಲು ಹಿಡಿಯಲು ೫.೦೦ ಕ್ಕೆ ಹೋಟೆಲ್ ಚೆಕ್ ಔಟ್ ಮಾಡುವ ಪ್ಲಾನ್... ಹಾಗಾಗಿ ಸ್ವಲ್ಪ ಹೊತ್ತು ಕಾರ್ಡ್ಸ್ ಆಟ...೪.೪೫ ರ ಹೊತ್ತಿಗೆ ಎಲ್ಲರೂ ರೈಲು ನಿಲ್ದಾಣಕ್ಕೆ ಹೊರಡಲು ರೆಡಿ ಆದರು...

ಹೊರಡುವ ಮುನ್ನ ಕರದಂಟು ಹಾಗೂ ಕುಂದ ಖರೀದಿಸಿದೆವು...

ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲೇ ಗೋಕಾಕ ಜಲಪಾತ ಸಿಗುತ್ತದೆ, ಒಂದು ೫ ನಿಮಿಷ ಸಮಯ ಇದ್ದರಿಂದ ಗುಂಪು-೨ ರ ಮಂದಿ, ಜಲಪಾತದ ಒಂದು ದೃಶ್ಯ ನೋಡಲು ಬಯಸಿದರು... ೫ ನಿಮಿಷದ ನಂತರ ಎಲ್ಲರೂ ಹಿಂತಿರುಗಿ ಬಂದರು...ಜೀಪ್ (ಟವೇರ) ರೈಲು ನಿಲ್ದಾಣದತ್ತ ಹೊರಟಿತು... ಜಲಪಾತದಿಂದ ಹಿಂದಿರುಗಿದ ಶಂಕರ ಯಾಕೋ ಕೊಪಿಸಿಕೊಂಡಿದ್ದ... (ಸೇತುವೆ ದಾಟಲು ಆತನ ಹೆಂಡತಿ ಮಾನಸ ಹೆದರಿದ್ದರಿಂದ ಇರಬೇಕು.. ೫:೩೫ ರ ಹೊತ್ತಿಗೆ ರೈಲು ನಿಲ್ದಾಣ ತಲುಪಿ... ೫:೪೫ ರೈಲು ಹಿಡಿದೆವು... ಗುಂಪು-೧ ೩ ನೆ ಸ್ಲೀಪೆರ್ ಬೋಗಿಯಲ್ಲಿ, ಕಬೀರ ದಂಪತಿಗಳು ೨ ನೆ ಎ ಸಿ, ಮತ್ತು ಉಳಿದವರು ೩ ನೆ ಎ ಸಿ ಯಲ್ಲಿ... ಮತ್ತೆ ಕಾರ್ಡ್ಸ್ ಆಟ, ಹಾಗೆಯೇ ಟೈಮ್ ಪಾಸ್.... ಬೆಳಗಾವಿ ತಲುಪಿದ ನಂತರ...ಶಂಕರ ದಂಪತಿಗಳನ್ನು ಆಗಾಗ ಮಾತಾಡಿಸಲು ಎಲ್ಲರೂ ಸರದಿಯಲ್ಲಿ ಹೋಗಿ ಬಂದರು(Privacy ಹಾಳು ಮಾಡಲು) Eye-wink ಏನೋ ಸ್ವಲ್ಪ ತಿಂದು ರಾತ್ರಿ ೧೦:೦೦ ರ ಹೊತ್ತಿಗೆ ಮಲಗಿದೆವು... ಬಹಳ ಚಳಿಯಿತ್ತು...

ಹಾಗೂ ಹೀಗೂ ರೈಲು ಬೆಂಗಳೂರನ್ನು ತಲುಪಿದಾಗ ಸಮಯ ಬೆಳಿಗ್ಗೆ ೭.೪೫...

ಬಹು ದಿನದ ನಿರೀಕ್ಷೆಯ ವಿನೋದನ ಮದುವೆ, ಮಜಾ ಹಾಗೂ ಧೀರ್ಘ ಪ್ರವಾಸದೊಂದಿಗೆ ಶುಭಂ ಅಯಿತು...

Tuesday, October 14, 2008

ತಲೆನೋವು

ಇಂದು ಸಂಜೆ ಕಛೇರಿಯಿಂದ ಮನೆಗೆ ಹೊರಟಾಗ ಮಳೆ ಬರುತ್ತಿತ್ತು... ಕಾರಿನಲ್ಲಿ ಆಫೀಸ್ ಗೆ ಹೋಗಿದ್ದರಿಂದ ಮಳೆಯಲ್ಲಿ ನೆನೆಯದೆಯೇ ಮನೆಗೆ ಬಂದೆ... ಮನೆಗೆ ಬಂದ ಕೂಡಲೇ ಅಮ್ಮ "ಏನೋ, ಈ ದಿನ ಇಷ್ಟು ಬೇಗ ಮನೆಗೆ ಬಂದೆ? ಅದಕ್ಕೇ ಅನ್ಸುತ್ತೆ ಮಳೆ ಬರ್ತಾ ಇದೆ" ಅಂತ ಹೇಳಿ ನಕ್ಕರು. ನಾನು "ಹಾಗೇನಿಲ್ಲ, ಸ್ವಲ್ಪ ತಲೆ ನೋವು. ಅದಕ್ಕೆ ಬೇಗ ಬಂದೆ. ಬಿಸಿ ಬಿಸಿ ಸ್ಟ್ರಾಂಗ್ ಕಾಫಿ ಕೊಡು. ತಲೆ ನೋವು ಸರಿ ಹೋಗುತ್ತೆ" ಅಂತ ಹೇಳಿ ರೂಮಿನೊಳಗೆ ಬಂದೆ. ಅಣ್ಣ Walking ಗೆ ಹೋಗಿದ್ರು. ನಾನು ಬಂದ ಹದಿನೈದು ನಿಮಿಷದ ನಂತರ ಅವರೂ ಮನೆಗೆ ಬಂದರು... ಅವರೂ ಸಹ "ಏನು, ಈ ದಿನ ಬೇಗ ಬಂದಿದ್ದೀಯಾ? ಅದಕ್ಕೆ ಮಳೆ ಬರ್ತಿದೆ" ಅಂತ ಹೇಳಿದರು. ನಾನು "ಇಲ್ಲ ಅಣ್ಣ, ತಲೆ ನೋವು, ಅದಕ್ಕೆ ಬೇಗ ಬಂದೆ" ಅಂತ ಹೇಳಿದೆ.

ಮಳೆ ಬರುತ್ತಿದ್ದರಿಂದ ಅಣ್ಣ "ಬಿಸಿ ಬಿಸಿಯಾಗಿ ಏನಾದರೂ ಮಾಡು" ಅಂತ ಅಮ್ಮನಿಗೆ ಹೇಳಿದರು... "ಮೆಣಸಿನಕಾಯಿ ಇದೆ. ಬಜ್ಜಿ ಮಾಡ್ತೀನಿ" ಅಂತ ಹೇಳಿ ಅಡುಗೆ ಮನೆಗೆ ಹೋದರು... ನನಗೆ ತಲೆನೋವಿದ್ದ ಕಾರಣ ಕೋಣೆಯಲ್ಲಿ ಸ್ವಲ್ಪ ಹೊತ್ತು ಮಲಗಿದೆ. ಅಮ್ಮ ಒಳಗೆ ಬಂದು "ಏಳೋ, ಮುಸ್ಸಂಜೆ ಹೊತ್ತು ಮಲಗಬಾರ್ದು" ಅಂತ ಹೇಳಿದ್ರು. ನಾನು "ಸರಿ ಏಳ್ತೀನಿ" ಅಂತ ಹೇಳಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿದೆ.

ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕಣ್ಣು ತೆಗೆಯುವಷ್ಟರಲ್ಲಿ ಗಡಿಯಾರದಲ್ಲಿ ಆರು ಘಂಟೆ ಆಗಿತ್ತು... ಎದ್ದು ಮುಖ ತೊಳೆದುಕೊಂಡು, ಟಿವಿ ಹಾಕಿ ಟಾಮ್ ಅಂಡ್ ಜೆರ್ರಿ ನೋಡಲು ಕುಳಿತೆ... ಅಷ್ಠೊತ್ತಿಗೆ ಅಮ್ಮ ಮೆಣಸಿನಕಾಯಿ ಬಜ್ಜಿಯನ್ನು ತಂದರು... ಬಿಸಿಬಿಸಿಯಾದ ಮೆಣ್ಸಿನ್ಕಾಯ್ ಬಜ್ಜಿಯನ್ನು ತಿನ್ನುವ ಹೊತ್ತಿಗೆ ಬಿಸಿಬಿಸಿ ಸ್ಟ್ರಾಂಗ್ ಕಾಫಿ ತಂದಿಟ್ಟರು... ಕಾಫಿ ಕುಡಿದು ಮತ್ತೆ ಸ್ವಲ್ಪ ಹೊತ್ತು ಮಲಗಿದೆ... ಮತ್ತೆ ಎದ್ದಾಗ ಏಳು ಘಂಟೆ ನಲವತ್ತೈದು ನಿಮಿಷವಾಗಿತ್ತು... ತಲೆ ನೋವು ಮಾಯವಾಗಿತ್ತು...

ಕಂಪ್ಯೂಟರ್ ಆನ್ ಮಾಡಿ ಸಂಪದದಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ನೀಡಿ, ಊಟ ಮುಗಿಸಿ, ನನ್ನ ತಲೆನೋವಿನ ಕತೆಯನ್ನು ಬರೆಯುವ ಹೊತ್ತಿಗೆ ರಾತ್ರಿ ಹತ್ತು ಘಂಟೆ ಮೂವತ್ತು ನಿಮಿಷವಾಗಿತ್ತು...