My Blog List

Monday, May 17, 2021

।ಅದ್ವೈತ ಹಾಗೂ ಕಗ್ಗ।

ಅದ್ವೈತ ಹಾಗೂ ಕಗ್ಗ

ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು।
ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ॥
ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ।
ಜಡವೆ ಜೀವದ ವಸತಿ - ಮಂಕುತಿಮ್ಮ॥

ಶಾಲೆಯಲ್ಲಿ ನಾವು Living and Nonliving things ಬಗ್ಗೆ ಓದಿ ತಿಳಿದುಕೊಂಡಿದ್ದೇವೆ. ಆದರೆ, ಇದರ ಬಗ್ಗೆ ಶಾಲೆಯಲ್ಲಿ ಕಲಿತದ್ದಕ್ಕು, ವಾಸ್ತವತೆಗೂ ವ್ಯತ್ಯಾಸ ಇದೆಯಂತೆ ಎಂಬುದನ್ನು ಅನೇಕ ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ. 

ಆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರವೂ ಯಾವುದೇ 'ಜಡ' ಎಂದು ಸೂಚಿಸುವ ವಸ್ತುಗಳಲ್ಲೂ ಅದ್ಯಾವುದೋ 'ಅಣು' (atoms) ರೂಪದ electron's, neutron, protonsಗಳು ತಮ್ಮ ಸೀಮಿತವಾದ ಪಥದಲ್ಲಿ ಸುತ್ತುತ್ತಿರುತ್ತವಂತೆ.‌ ಇಂತಹ ವೈಜ್ಞಾನಿಕ ಸಂಶೋಧನೆಗಳಿಗೂ ಮೊದಲೇ ಶ್ರೀ ಆದಿ ಶಂಕರರು ಇದರ ಬಗ್ಗೆ ತಮ್ಮ ಭಾಶ್ಯಗಳಲ್ಲಿ ವಿಸ್ತಾರವಾಗಿ ಜಗತ್ತಿಗೆ ತಿಳಿಸಿದ್ದಾರೆ.  ಮೇಲಿನ "ಕಗ್ಗ"ದ ತಿರುಳೂ ಸಹಾ ಅದನ್ನೇ ಪ್ರತಿಪಾದಿಸುತ್ತದೆ.

ಪ್ರಾಯಶಃ 'ಜಡ' ಮತ್ತು 'ಜೀವ' ವಸ್ತುಗಳ (living and non-living) ನಡುವೆ ಇರುವ ಅವಿನಾಭಾವ ಸಂಬಂಧಗಳನ್ನು ಇದಕ್ಕಿಂತ ಸುಲಭವಾಗಿ ಸ್ಪಷ್ಟವಾಗಿ ಡಿವಿಜಿಯವರಿಗಿಂತ ಮತ್ತೊಬ್ಬರು ಸ್ಪಷ್ಟೀಕರಿಸಲು ಸಾಧ್ಯವಿಲ್ಲವೇನೋ. ಆ ಆಯಾಮದಲ್ಲಿ ಚಿಂತನೆ ಮಾಡಿದಾಗ ಜಡ ವಸ್ತು, ಜೀವ ವಸ್ತುಗಳ ನಡುವೆ ಮೇಲ್ನೋಟಕ್ಕೆ ವ್ಯತ್ಯಾಸಗಳಿವೆ ಎನಿಸಿದರೂ ಅವು ಒಂದರಮೇಲೊಂದು ಅವಲಂಬಿಸಿರುವುದು ಸತ್ಯ. ಜಡವಸ್ತುಗಳಲ್ಲೂ ಯಾವುದೋ ಒಂದು ಚೈತನ್ಯ ಅಡಿಗಿರುವುದು ಖಚಿತ ಎಂಬುದು ಮೇಲಿನ ಕಗ್ಗದ ಸಾರಾಂಶ.

ಇದನ್ನೆ ಅಲ್ಲವೇ ಶ್ರೀ ಶ್ರೀ ಶ್ರೀ ಶಂಕರರು ತಮ್ಮ‌ ಅದ್ವೈತ ಸಿದ್ಧಾಂತದಲ್ಲಿ ಹೇಳಿದ್ದು: 
ಜೀವ, ಜಗತ್ತು ಮತ್ತು ಈಶ್ವರ.

||ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ||

ಜೀವ + ಜಗತ್ತು ಒಂದೇ, ಅದು ಮಿತ್ಯ. ಈಶ್ವರ ಒಬ್ಬನು ಮಾತ್ರವೇ ಸತ್ಯ. ಹಲವು ಅದ್ವೈತ ವಿರೋಧಿಗಳು ಇಲ್ಲಿನ 'ಮಿತ್ಯ' ಎಂಬುದನ್ನು 'ಸುಳ್ಳು' ಎಂದು ತಿರಿಚುವ ಪ್ರಯತ್ನಗಳಿಗೆ ಕೊರತೆಯಿಲ್ಲ. ಬಿಡಿ,ಅದು ಅವರವರ ಪ್ರಾರಬ್ಧ ಕರ್ಮವಷ್ಟೇ.

|'ಜಡ' ವಸ್ತುವಿನಲ್ಲಿ 'ಜೀವ'ದ ಚೈತನ್ಯ ಇರುವುದಾದರೂ ಹೇಗೆ?|

ನಾಗಾರಾಧನೆಯ ದಿನ ಬೆಳಗಿನಿಂದ ಉಪವಾಸ. ಎಲ್ಲರೂ ತನಿ ಎರೆದ ನಂತರ ಶ್ರೀ ಶ್ರೀನಿವಾಸ ದೇವಾಲಯದಲ್ಲಿ ಮಹಾ ಮಂಗಳಾರತಿ ಪ್ರಾರಂಭ. ಅದು ಕೊಂಚ ತಡವಾಗೋದು ಮಾಮೂಲು. ಆದರೆ, ಮಹಾ ಮಂಗಳಾರತಿಯ ನಂತರವೇ ಮಹಾ ಪ್ರಸಾದ, ವಿನಿಯೋಗ. ಮೊದಲೇ ಕೆಲವರಿಗೆ ಮಧುಮೇಹ, ಹೊಟ್ಟೆ ಚುರುಗುಟ್ಟುತ್ತಿದೆ. ಅಷ್ಟರಲ್ಲಿ "ಅನ್ನ ಸಂತರ್ಪಣಾ ನಿಧಿಗೆ'' ಒಂದಷ್ಟು ಹಣ ಸಂದಾಯ ಮಾಡಲು ಹೋದಾಗ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ವಿನಮ್ರತೆಯಿಂದ ಹಣ ಸ್ವೀಕರಿಸಿ, ರಸೀತಿ ಜೊತೆ ಒಂದು ತುಣುಕು 'ಕಲ್ಲು ಸಕ್ಕರೆ' ಕೊಟ್ಟಾಗ ಅದನ್ನು ಪ್ರಸಾದ ಎಂದು ಸ್ವೀಕರಿಸಿ ನಾಲಗೆಯ ಮೇಲಿಟ್ಟಾಗ, ಆ ನಿರ್ಜೀವ-ಜಡ ಕಲ್ಲುಸಕ್ಕರೆಯಿಂದ ದಕ್ಕಿದ ಚೈತನ್ಯವು ಉರುವಲಾಗಿ ದೇಹಕ್ಕೆ ಕ್ಷಣಕಾಲ ತಾತ್ಕಾಲಿಕ ನಿರಾಳ.

ಅಂತೂ ಊಟಕ್ಕೆ ಕೂತಾಯ್ತು, ಒಂದೊಂದೆ ಪಾಕಿಸಿದ ಪದಾರ್ಥಗಳು  ಎಲೆಯ ಮೂಲೆಗಳಲ್ಲಿ ಕುಳಿತಾಯ್ತು. ಅನ್ನದ ಮೇಲಿನ ತೊವ್ವೆ, ತುಪ್ಪ ಬರುವಷ್ಟರಲ್ಲಿ ಹಸಿವು ಮತ್ತೂ ಹೆಚ್ಚಾಯ್ತು. 'ಹರ ಹರ ಮಹಾದೇವ್' ಗೋವಿಂದ, ಗೋವಿಂದಾ, ಎಂಬ ನಾಮ ಸ್ಮರಣೆಯ ಸಮಯ ಬಂದಾಯ್ತು. ಪರಿಶಂಚನೆ, ಆಪೋಶನದ ನಂತರ ಪಾಯಸಕ್ಕೆ ಕೈ ಹಾಕಿದಾಗ ನೆಮ್ಮದಿಯ ನಿಟ್ಟುಸಿರು. 

ಇಲ್ಲಿ ಊಟಕ್ಕೆ ಬಡಿಸಿದ ಪದಾರ್ಥಗಳೆಲ್ಲವೂ ಜೀವ ಇಲ್ಲದ 'ಜಡ' ಪದಾರ್ಥಗಳು. ಅವು ಒಂದೊಂದೆ ನಮ್ಮ ದೇಹದೊಳಗೆ ಸೇರಿದಾಗ ಕೊಂಚ ಕೊಂಚವಾಗಿ ಜೀವಕ್ಕೆ ಚೈತನ್ಯ. ಅಂದರೆ ಜಡ ವಸ್ತುವಿನಲ್ಲಿ ಜೀವಕ್ಕೆ ಚೇತನ, ಚೈತನ್ಯ ನೀಡುವ ಅದಾವುದೋ ಅಗೋಚರ ಶಕ್ತಿ ಇದೆ ಎನ್ನುವುದು ಸತ್ಯವಾಯಿತಲ್ಲ. ಅದನ್ನೇ ನಾವು ನಿರಾಕಾರನಾದ 'ಬ್ರಹ್ಮನ್' ಈಶ್ವರ, ಶಕ್ತಿ, ಚೇತನ ಎನ್ನೋಣ. ನಮ್ಮಲ್ಲಿ ಒಂದು ಮಾತಿದೆ. "ಅನ್ನ (ಆಹಾರ) ಪರಬ್ರಹ್ಮ ಸ್ವರೂಪ" ಎನ್ನುವುದು ವಾಡಿಕೆ. 

ಲೋಹ, ಗಾಜು, ಪ್ಲಾಸ್ಟಿಕ್ ಗಳಿಂದ ತಯಾರಿಸಿದ ವಾಹನ 'ಜಡ' ವಸ್ತು. ಅದಕ್ಕೆ ಅನುಕೂಲವಾದ ಇಂಧನ ತುಂಬಿ, ಅದ್ಯಾವುದೋ ಗುಂಡಿ (button) ಒತ್ತಿದಾಗ, ವಾಹನ ಚಲಿಸುವುದು. ಅಲ್ಲಿನ ತಾಂತ್ರಿಕ ಕ್ರಿಯೆಗಳು ಏನೇ ಇರಲಿ, ಜಡ ಎನಿಸಿದ ವಾಹನ ಮತ್ತು ಇಂಧನದ ನಡುವಿನ ಕ್ರಿಯೆಯನ್ನು ತಾರ್ಕಿಕವಾಗಿ ಅಗೋಚರ ಚೇತನ, ಚೈತನ್ಯ, ಈಶ್ವರ, ಬ್ರಹ್ಮನ್ ಎನ್ನಬಹುದಲ್ಲಾ!

ಎರಡು ನುಣುಪಾದ ಕಲ್ಲುಗಳನ್ನು ಸತತವಾಗಿ ಉಜ್ಜಿದಾಗ ಆಗುವ ಘರ್ಷಣೆಯಿಂದ ಶಾಖ ಉತ್ಪನ್ನವಾದಾಗ, ಅಗ್ನಿಯ ಉಗಮ. ಜಡ ಕಲ್ಲಿನ ಚೂರುಗಳು ಮತ್ತು ಘರ್ಷಣೆಯ ಕ್ರಿಯೆಯಗಳ ನಡುವೆ ಇಟ್ಟ 'ಹತ್ತಿ'ಯ ಸಣ್ಣ ಚೂರಿನ ಮೂಲಕ ಜ್ವಾಲೆ ಉತ್ಪತ್ತಿಯಾಗಿದ್ದು ಹೇಗೆ.? ಅವುಗಳಲ್ಲಿ ಅಡಗಿರುವ ಚೈತನ್ಯ ಯಾವುದು?

ಎಲ್ಲೋ ಕಾಡಿನ ಮಧ್ಯದಲ್ಲಿ ಧುಮುಕುವ ಜಲಪಾತ, ಅದಕ್ಕೆ ಯಾವುದೋ ಯಂತ್ರಗಳನ್ನು ಕ್ರಮದಲ್ಲಿ ಜೋಡಿಸಿದಾಗ, ನೀರಿನ ಧುಮುಕುವ ರಭಸಕ್ಕೆ ಯಂತ್ರ ತಿರುಗಿತು. ಅಲ್ಲಿ ವಿದ್ಯುತ್ ಉತ್ಪತ್ತಿಯಾಯಿತು. ಅಲ್ಲಿಂದ ದೂರದ ಮನೆಗೆ ತಂತಿಯಲ್ಲಿ ವಿದ್ಯುತ್ ಹರಿದು ಮನೆಗೆ ಬಂತು. ಗುಂಡಿ ಒತ್ತಿದೊಡನೆ ಮನೆಯ ದೀಪ ಬೆಳಗಿತು. ಇಲ್ಲಿ ವಿದ್ಯುತ್ ಎಂಬ ಶಕ್ತಿ, ಚೈತನ್ಯ ಅಗೋಚರ. ನೀರು, ಯಂತ್ರ, ತಂತಿ, ವಿದ್ಯುತ್ ದೀಪದ ಬಲ್ಬು ಎಲ್ಲವೂ ಜಡ ವಸ್ತುಗಳು. ಹಾಗಿದ್ದಲ್ಲಿ ದೀಪದ ಬಲ್ಬಿಗೆ ತಂತಿಯ ಮೂಲಕ ಅಗೋಚರವಾದ ಚೇತನವೆಂಬ ವಿದ್ಯುತ್ ಹರಿದು ಬಂದದ್ದಾದರೂ ಹೇಗೆ?

ಈ ಎಲ್ಲ ಸಂದೇಹಗಳಿಗೆ ತಮ್ಮ ಸಿದ್ಧಾಂತಗಳ ಮೂಲಕ ನಮಗೆ ಸಮರ್ಪಕವಾದ ಉತ್ತರ ಕೊಟ್ಟು ನಮಗೆ ದಾರಿದೀಪವಾದ ಶ್ರೀ ಶ್ರೀ ಶ್ರೀ ಶಂಕರ ಭಗವದ್ಪಾದರಿಗೆ ಅನಂತಾನಂತ ನಮನಗಳು.

"ನಮಾಮಿ ಶಂಕರ"

ಎಲ್ಲಾ ಸನಾತನ ಬಂಧುಗಳಿಗೂ "ಶಂಕರ ಜಯಂತಿ"ಯ ಶುಭಕಾಮನೆಗಳು.