My Blog List

Monday, May 24, 2021

ಭಗವದ್ಗೀತೆಯಲ್ಲಿ "ಭಗವಾನ್ ಉವಾಚ‌" ಏಕೆ?

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಉವಾಚ‌ ಏಕಿಲ್ಲ? 

ಭಗವದ್ಗೀತೆಯಲ್ಲಿ ಸಂಜಯ ಹೇಳಿದ್ದು - ಸಂಜಯ ಉವಾಚ.
ಅರ್ಜುನ ಹೇಳಿದ್ದು - ಅರ್ಜುನ ಉವಾಚ.
ದೃತರಾಷ್ಟ್ರ ಹೇಳಿದ್ದು - ದೃತರಾಷ್ಟ್ರ ಉವಾಚವಾಯಿತು.
ಹಾಗಿದ್ದಲ್ಲಿ, ಶ್ರೀಕೃಷ್ಣ ಹೇಳಿದ್ದು - ಶ್ರೀಕೃಷ್ಣ ಉವಾಚ‌ ಎಂಬ ಉಲ್ಲೇಖ ಏಕಿಲ್ಲ? 

ಭಗವದ್ಗೀತೆಯನ್ನು ಓದುವವರ ಸಂಖ್ಯೆಯು ಕಡಿಮೆಯೇನಿಲ್ಲ. ನಮಗೆ ಭಗವದ್ಗೀತೆಯಲ್ಲಿನ ಕನಿಷ್ಠ ಒಂದು ಶ್ಲೋಕವಾದರೂ ಸದಾ ನೆನಪಿನಲ್ಲಿ ಉಳಿದಿರುವುದು ಸಹಜ. ಇನ್ನು ಕೆಲವು ಮಂದಿ ಅದರಲ್ಲಿ ಅಂತಹುದೇನಿದೆ ಎಂಬ ಕುತೂಹಲಕ್ಕೆ ಓದಲು ಪ್ರಾರಂಭಿಸಿ, ಕೊನೆಗೆ ತಮಗೆ ಅರಿವಿಲ್ಲದೆಯೇ ಅದರ ಆಳಕ್ಕೆ ಇಳಿದವರೂ ಇದ್ದಾರೆ. 

ಭಗವದ್ಗೀತೆ ಭೋದನೆ, ಪಾಂಡವರ ಹಾಗೂ ಕೌರವರ ನಡುವೆ ಕುರುಕ್ಷೇತ್ರ ಯುದ್ಧ ಪ್ರಾರಂಭ ಆಗುವ ಸಂಧರ್ಭ. ಅರ್ಜುನ ತನ್ನ ರಥದ ಸಾರಥಿಯಾದ ಶ್ರೀಕೃಷ್ಣನಲ್ಲಿ ತನ್ನ ಅಳಲನ್ನು ತೋಡಿಕೊಂಡು, ಯುದ್ಧದಲ್ಲಿ ತನಗೆ ಆಸಕ್ತಿ ಇಲ್ಲ, ನನಗೆ ಯುದ್ಧ ಮಾಡುವ ಮನಸ್ಸಿಲ್ಲ, ಎಂದು ಹೇಳಿ ತನ್ನ ಬಿಲ್ಲು ಬಾಣಗಳನ್ನು ಕೆಳಗೆ ಇಳಿಸಿದ. ರಥವು ಎರಡು ಸೇನೆಗಳ ಮಧ್ಯದಲ್ಲಿ ನಿಲ್ಲಿಸಲಾಯಿತು. 

ಇನ್ನು, ಶ್ರೀಕೃಷ್ಣನು ಯುದ್ಧ ಮಾಡಲೇಬೇಕಾದ ಅನಿವಾರ್ಯತೆ ಏನು ಎಂಬುದನ್ನು ಅರ್ಜುನನಿಗೆ ಹದಿನೆಂಟು ಅಧ್ಯಾಯಗಳಲ್ಲಿ ಶ್ಲೋಕಗಳ ಮೂಲಕ ಮನದಟ್ಟು ಮಾಡಿಕೊಟ್ಟ. ಇದನ್ನು ಸಂಜಯನು ತನ್ನ ರಾಜನಾದ ದೃತರಾಷ್ಟ್ರನಿಗೆ ವಿವರಿಸುತ್ತಿದ್ದ. ಇದಿಷ್ಟು ಭಗವದ್ಗೀತೆ ಭೋದನೆ ಮಾಡಿದ ಸಂಧರ್ಭ. 

ಇಲ್ಲಿ ಭಗವದ್ಗೀತೆಯ ಸಾರ ಏನಿದೆ ಎಂಬುದನ್ನು ಬದಿಗಿಟ್ಟು, ಸರ್ವ ಧರ್ಮೀಯರಿಗೂ ಭಗವದ್ಗೀತೆ ಉಪದೇಶ ಹೇಗೆ ಅನ್ವಯ ಆದೀತು ಎಂಬುದನ್ನು ಶ್ರೀಕೃಷ್ಣ ಮಾರ್ಮಿವಾಗಿ ತಿಳಿಸಿದ್ದಾನೆ ಎಂಬುದು ಗಮನಾರ್ಹ.

ಭಗವದ್ಗೀತೆಯಲ್ಲಿ ಅರ್ಜುನನ ಸಂದೇಹಗಳು! 
ಪ್ರಶ್ನೆಗಳನ್ನು = ಅರ್ಜುನ ಉವಾಚ ಎಂದು ಸೂಚಿಸಲ್ಪಟ್ಟಿದೆ.
ಹಾಗೇಯೆ, ಧೃತರಾಷ್ಟ್ರ= ಉವಾಚ.
ಸಂಜಯ = ಉವಾಚ 
ಈ ರೀತಿಯಲ್ಲಿ ಉಲ್ಲೇಖಿಸಲಾಗಿದೆ.

ಹಾಗಿದ್ದಲ್ಲಿ, ಶ್ರೀಕೃಷ್ಣ ಹೇಳಿದ್ದನ್ನು ಶ್ರೀಕೃಷ್ಣ ಉವಾಚ ಎನ್ನಬಹುದಾಗಿತ್ತಲ್ಲ! ಭಗವದ್ಗೀತೆಯಲ್ಲಿ ಎಲ್ಲಿಯೂ ಶ್ರೀಕೃಷ್ಣ ಉವಾಚ ಎಂಬ ಉಲ್ಲೇಖವಿಲ್ಲ. ಶ್ರೀಕೃಷ್ಣ ಹೇಳಿದ್ದನ್ನು "ಶ್ರೀ ಭಗವಾನ್ ಉವಾಚ" ಎಂಬುದಾಗಿ ಮಾತ್ರ ಉಲ್ಲೇಖಿಸಲಾಗಿದೆ. 

ಭಗವಾನ್ ಅಥವಾ "ಭಗವಂತ" ಎನ್ನುವುದು ಯಾವುದೋ ನಮಗೆ ಇಷ್ಟವಾದ ಒಬ್ಬ ದೇವರೋ, ಒಂದು ಧರ್ಮಕ್ಕೋ ಅಂಟಿಕೊಂಡದ್ದಲ್ಲ.‌ ಅದೊಂದು ಅಗೋಚರ ನಿರಾಕಾರ ಸಕಲ ಚರಾಚರಗಳಲ್ಲಿಯೂ ಅಡಗಿರುವ ಚೇತನ, ಅದು ಸರ್ವಸ್ವವನ್ನೂ ಆವರಿಸಿದೆ. ಅದು ನಮ್ಮ ಪ್ರತಿಯೊಬ್ಬರ ನಂಬಿಕೆ. ಹಾಗಾಗಿ ಶ್ರೀಕೃಷ್ಣ ಭಗವದ್ಗೀತೆಯು 'ತನ್ನ' ಭೋದನೆ ಎಂದು ಎಲ್ಲಿಯೂ ಗುರುತಿಸಲ್ಪಡುವುದನ್ನು ಇಚ್ಚಿಸಲಿಲ್ಲ. 

ಭಗವದ್ಗೀತೆಯ ಬೋಧನೆ ಏನಿದ್ದರೂ, ಅದು ಭಗವಂತನ ಗೀತೆ, ಭಗವಂತನ ಭೋದನೆ. ಪ್ರತಿ ಮಾನವನ ವಿಭಿನ್ನ ಧರ್ಮದವರಿಗೂ ಯಾವ ಭಗವಂತನಲ್ಲಿ ನಂಬಿಕೆ ಇದೆಯೋ, ಅದು ಆ ಭಗವಂತನ ಭೋದನೆಯಾಗಿಲಿ, ಎಂಬ ಮಾರ್ಮಿಕವಾದ ಶ್ರೀಕೃಷ್ಣನ ಸಂದೇಶ. 

| ಕೃಷ್ಣಂ ವಂದೇ ಜಗದ್ಗುರುಮ್ |