My Blog List

Monday, May 31, 2021

ಭಾಮಿನಿ ಷಟ್ಪದಿ - 2

ತಾಯಿ ಶಾರದೆ ಲೋಕ ಪೂಜಿತೆ
ಮಾಯೆಯಿಂದುದ್ಧರಿಸಿ ಎನ್ನನು
ಕಾಯುತಿರುವಳು ತಿಳಿವನೂಡಿಸಿ ತನ್ನ ಮಡಿಲಿನಲಿ। 
ತಾಯ ಕರುಣೆಯ ಮನದಿ ನೆನೆಯುತ
ಕಾಯಿ ಹೂಗಳ ದೇವಿಗರ್ಪಿಸಿ 
ಬಾಯಿ ತೆರೆದವಳನ್ನೆ ಹಾಡುತಲಿಂದು ನಲಿದಿಹೆನು॥ 2 ॥

Sunday, May 30, 2021

ಚೌಪದಿ - 120

ಬಗೆಬಗೆಯ ಮಾತಿನಲಿ ಬಡಿವಾರವನು ನೋಡಿ। 
ಹಗೆಯನ್ನು ಸಾಧಿಸಲು ಮುಂದಾಗಬೇಡ॥ 
ಜಗದಲ್ಲಿ ಬಹಳಷ್ಟು ಜನರೆಲ್ಲ ಹೀಗೆಯೇ। 
ಗಗನದಲಿ ಹಾರುವರೊ - ಅನಿಕೇತನ॥ 120 ॥ 

Saturday, May 29, 2021

ಭಾಮಿನಿ ಷಟ್ಪದಿ - 1

ನಮಿಸುತಿರುವೆನು ವಿಘ್ನರಾಜಗೆ 
ನಮಿಸಿ ಬೇಡಿಹೆ ಶಾರದಾಂಬೆಗೆ
ನಮಿಸಿ ಬಾಗುತ ಶಿವನ ಪಾದಕೆ ವರವ ಕೇಳಿಹೆನು। 
ಕಮಲನಯನನು ನಗುತಲಿರುವನು 
ಗಮನ ಹರಿಸುತಲೆನ್ನ ಭಕುತಿಗೆ 
ರಮೆಯ ಕರೆದಿಹನೋದಲೆನ್ನಯ ಮೊದಲ ಷಟ್ಪದಿಯ॥ 1 ॥ 

ಚೌಪದಿ - 119

ಯಾವುದೋ ವಿಷಯಕ್ಕೆ ಮನವನ್ನು ಹದಗೆಡಿಸಿ। 
ಭಾವನೆಗೆಯಡಿಯಾಳು ನೀನಾಗಬೇಡ॥ 
ನೋವುಗಳ ನೆನೆಯದೇ ನಸುನಗುತ ಸಾಗುವುದೆ। 
ಜೀವನದ ಧರ್ಮವೋ - ಅನಿಕೇತನ॥ 119 ॥ 

Wednesday, May 26, 2021

ಚೌಪದಿ - 118

ಬದುಕೆಂಬ ಚರ್ಮವದು ದಿನದಿನವು ಸವೆದಿರಲು। 
ಹದವಾದ ಕೆನೆಹಾಲಿನಾರೈಕೆ ಮಾಡು॥ 
ಮದವನ್ನು ಬಿಟ್ಟುಬಿಡೆ ಮನವರಿಕೆಯಾಗುವುದು। 
ಬದುಕಲ್ಲೆ ಧರ್ಮವಿದೆ - ಅನಿಕೇತನ॥ 118 ॥ 

Tuesday, May 25, 2021

ಚೌಪದಿ - 117

ಕರ್ಮವನು ಮಾಡುತಿರು ಫಲದ ಚಿಂತೆಯ ಬಿಟ್ಟು। 
ಧರ್ಮವನು ಬಿಡದೆಯೇ ಸಾಗುತಿರು ಮುಂದೆ॥ 
ಕರ್ಮವದು ತೂಗುವುದು ಬದುಕಿನಾ ಹಾದಿಯನು। 
ಧರ್ಮವದು ಕಾಯುವುದೊ - ಅನಿಕೇತನ॥ 117 ॥

Monday, May 24, 2021

ಚೌಪದಿ - 116

ಮಾಯೆಯಾ ಲೋಕಕ್ಕೆ ಕರೆದೊಯ್ದ ಶಾರದೆಯು। 
ಪಾಯಸವ ಬಡಿಸಿಹಳು ಬಲು ಕರುಣೆಯಿಂದ॥ 
ಬಾಯಿಂದ ಸ್ತೋತ್ರಗಳ ಪಠಣವಾ ಮಾಡುತಿರೆ। 
ತಾಯಿಯೇ ಹರಸಿಹಳೊ - ಅನಿಕೇತನ॥ 116 ॥ 

ಭಗವದ್ಗೀತೆಯಲ್ಲಿ "ಭಗವಾನ್ ಉವಾಚ‌" ಏಕೆ?

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಉವಾಚ‌ ಏಕಿಲ್ಲ? 

ಭಗವದ್ಗೀತೆಯಲ್ಲಿ ಸಂಜಯ ಹೇಳಿದ್ದು - ಸಂಜಯ ಉವಾಚ.
ಅರ್ಜುನ ಹೇಳಿದ್ದು - ಅರ್ಜುನ ಉವಾಚ.
ದೃತರಾಷ್ಟ್ರ ಹೇಳಿದ್ದು - ದೃತರಾಷ್ಟ್ರ ಉವಾಚವಾಯಿತು.
ಹಾಗಿದ್ದಲ್ಲಿ, ಶ್ರೀಕೃಷ್ಣ ಹೇಳಿದ್ದು - ಶ್ರೀಕೃಷ್ಣ ಉವಾಚ‌ ಎಂಬ ಉಲ್ಲೇಖ ಏಕಿಲ್ಲ? 

ಭಗವದ್ಗೀತೆಯನ್ನು ಓದುವವರ ಸಂಖ್ಯೆಯು ಕಡಿಮೆಯೇನಿಲ್ಲ. ನಮಗೆ ಭಗವದ್ಗೀತೆಯಲ್ಲಿನ ಕನಿಷ್ಠ ಒಂದು ಶ್ಲೋಕವಾದರೂ ಸದಾ ನೆನಪಿನಲ್ಲಿ ಉಳಿದಿರುವುದು ಸಹಜ. ಇನ್ನು ಕೆಲವು ಮಂದಿ ಅದರಲ್ಲಿ ಅಂತಹುದೇನಿದೆ ಎಂಬ ಕುತೂಹಲಕ್ಕೆ ಓದಲು ಪ್ರಾರಂಭಿಸಿ, ಕೊನೆಗೆ ತಮಗೆ ಅರಿವಿಲ್ಲದೆಯೇ ಅದರ ಆಳಕ್ಕೆ ಇಳಿದವರೂ ಇದ್ದಾರೆ. 

ಭಗವದ್ಗೀತೆ ಭೋದನೆ, ಪಾಂಡವರ ಹಾಗೂ ಕೌರವರ ನಡುವೆ ಕುರುಕ್ಷೇತ್ರ ಯುದ್ಧ ಪ್ರಾರಂಭ ಆಗುವ ಸಂಧರ್ಭ. ಅರ್ಜುನ ತನ್ನ ರಥದ ಸಾರಥಿಯಾದ ಶ್ರೀಕೃಷ್ಣನಲ್ಲಿ ತನ್ನ ಅಳಲನ್ನು ತೋಡಿಕೊಂಡು, ಯುದ್ಧದಲ್ಲಿ ತನಗೆ ಆಸಕ್ತಿ ಇಲ್ಲ, ನನಗೆ ಯುದ್ಧ ಮಾಡುವ ಮನಸ್ಸಿಲ್ಲ, ಎಂದು ಹೇಳಿ ತನ್ನ ಬಿಲ್ಲು ಬಾಣಗಳನ್ನು ಕೆಳಗೆ ಇಳಿಸಿದ. ರಥವು ಎರಡು ಸೇನೆಗಳ ಮಧ್ಯದಲ್ಲಿ ನಿಲ್ಲಿಸಲಾಯಿತು. 

ಇನ್ನು, ಶ್ರೀಕೃಷ್ಣನು ಯುದ್ಧ ಮಾಡಲೇಬೇಕಾದ ಅನಿವಾರ್ಯತೆ ಏನು ಎಂಬುದನ್ನು ಅರ್ಜುನನಿಗೆ ಹದಿನೆಂಟು ಅಧ್ಯಾಯಗಳಲ್ಲಿ ಶ್ಲೋಕಗಳ ಮೂಲಕ ಮನದಟ್ಟು ಮಾಡಿಕೊಟ್ಟ. ಇದನ್ನು ಸಂಜಯನು ತನ್ನ ರಾಜನಾದ ದೃತರಾಷ್ಟ್ರನಿಗೆ ವಿವರಿಸುತ್ತಿದ್ದ. ಇದಿಷ್ಟು ಭಗವದ್ಗೀತೆ ಭೋದನೆ ಮಾಡಿದ ಸಂಧರ್ಭ. 

ಇಲ್ಲಿ ಭಗವದ್ಗೀತೆಯ ಸಾರ ಏನಿದೆ ಎಂಬುದನ್ನು ಬದಿಗಿಟ್ಟು, ಸರ್ವ ಧರ್ಮೀಯರಿಗೂ ಭಗವದ್ಗೀತೆ ಉಪದೇಶ ಹೇಗೆ ಅನ್ವಯ ಆದೀತು ಎಂಬುದನ್ನು ಶ್ರೀಕೃಷ್ಣ ಮಾರ್ಮಿವಾಗಿ ತಿಳಿಸಿದ್ದಾನೆ ಎಂಬುದು ಗಮನಾರ್ಹ.

ಭಗವದ್ಗೀತೆಯಲ್ಲಿ ಅರ್ಜುನನ ಸಂದೇಹಗಳು! 
ಪ್ರಶ್ನೆಗಳನ್ನು = ಅರ್ಜುನ ಉವಾಚ ಎಂದು ಸೂಚಿಸಲ್ಪಟ್ಟಿದೆ.
ಹಾಗೇಯೆ, ಧೃತರಾಷ್ಟ್ರ= ಉವಾಚ.
ಸಂಜಯ = ಉವಾಚ 
ಈ ರೀತಿಯಲ್ಲಿ ಉಲ್ಲೇಖಿಸಲಾಗಿದೆ.

ಹಾಗಿದ್ದಲ್ಲಿ, ಶ್ರೀಕೃಷ್ಣ ಹೇಳಿದ್ದನ್ನು ಶ್ರೀಕೃಷ್ಣ ಉವಾಚ ಎನ್ನಬಹುದಾಗಿತ್ತಲ್ಲ! ಭಗವದ್ಗೀತೆಯಲ್ಲಿ ಎಲ್ಲಿಯೂ ಶ್ರೀಕೃಷ್ಣ ಉವಾಚ ಎಂಬ ಉಲ್ಲೇಖವಿಲ್ಲ. ಶ್ರೀಕೃಷ್ಣ ಹೇಳಿದ್ದನ್ನು "ಶ್ರೀ ಭಗವಾನ್ ಉವಾಚ" ಎಂಬುದಾಗಿ ಮಾತ್ರ ಉಲ್ಲೇಖಿಸಲಾಗಿದೆ. 

ಭಗವಾನ್ ಅಥವಾ "ಭಗವಂತ" ಎನ್ನುವುದು ಯಾವುದೋ ನಮಗೆ ಇಷ್ಟವಾದ ಒಬ್ಬ ದೇವರೋ, ಒಂದು ಧರ್ಮಕ್ಕೋ ಅಂಟಿಕೊಂಡದ್ದಲ್ಲ.‌ ಅದೊಂದು ಅಗೋಚರ ನಿರಾಕಾರ ಸಕಲ ಚರಾಚರಗಳಲ್ಲಿಯೂ ಅಡಗಿರುವ ಚೇತನ, ಅದು ಸರ್ವಸ್ವವನ್ನೂ ಆವರಿಸಿದೆ. ಅದು ನಮ್ಮ ಪ್ರತಿಯೊಬ್ಬರ ನಂಬಿಕೆ. ಹಾಗಾಗಿ ಶ್ರೀಕೃಷ್ಣ ಭಗವದ್ಗೀತೆಯು 'ತನ್ನ' ಭೋದನೆ ಎಂದು ಎಲ್ಲಿಯೂ ಗುರುತಿಸಲ್ಪಡುವುದನ್ನು ಇಚ್ಚಿಸಲಿಲ್ಲ. 

ಭಗವದ್ಗೀತೆಯ ಬೋಧನೆ ಏನಿದ್ದರೂ, ಅದು ಭಗವಂತನ ಗೀತೆ, ಭಗವಂತನ ಭೋದನೆ. ಪ್ರತಿ ಮಾನವನ ವಿಭಿನ್ನ ಧರ್ಮದವರಿಗೂ ಯಾವ ಭಗವಂತನಲ್ಲಿ ನಂಬಿಕೆ ಇದೆಯೋ, ಅದು ಆ ಭಗವಂತನ ಭೋದನೆಯಾಗಿಲಿ, ಎಂಬ ಮಾರ್ಮಿಕವಾದ ಶ್ರೀಕೃಷ್ಣನ ಸಂದೇಶ. 

| ಕೃಷ್ಣಂ ವಂದೇ ಜಗದ್ಗುರುಮ್ | 

ಚೌಪದಿ - 115

ಕತೆಕವನಗಳನೋದಿ ಬರೆಯುತ್ತ ಬಲು ಮಂದ-। 
ಗತಿಯಲ್ಲಿ ಹೊರಟಿಹರು ಗೆಳೆಯರೊಡಗೂಡಿ॥ 
ಜೊತೆಯಾಗಿ ಪಾಠಗಳನೊಂದಂದೆ ಕಲಿಯುತ್ತ। 
ಜತನದಲಿ ಸಾಗಿಹರೊ - ಅನಿಕೇತನ॥ 115 ॥  

Saturday, May 22, 2021

#PrayForLokaKalyana Initiative - A positive vibe.

When a few like-minded people came together as a part of the #PrayForLokaKalyana initiative at the beginning of the month of May, I was extremely happy to be part of it. Initially, it was an impromptu session of the Chanting for which we got a great response and then a small group was created within and it continued for 11 days. 

For 11 days, we witnessed some wonderful voices who were part of the #VishnuSahasranama Chanting and other Shlokas too. 

We also planned for the 7pm session which was divine in its own sense. Here too, we witnessed some divine voices who chanted the #LalithaSahasranama along with some great #DeviStutis 

The chanting began on the auspicious day of the Ekadashi and culminated on the auspicious occasion of the #ShankaraJayanti where we listened to some beautiful KRtis by #AdiShankaracharya

Even after five days of the culmination of the program, the mind and the body have become more active. The mind is confident and the body is responding very well and vice-versa. Some sessions were really mesmerizing and we experienced a lot of positivity within the core team. 

What started as a small group has become bigger with a lot of divine souls volunteering to do sessions by taking responsibilities. Though they are using their own platforms to continue, a new journey towards the spiritual path has just begun. Let us hope to continue this journey with our loved ones as we #PrayForLokaKalyana 

Thanks to all the people who are involved in this noble cause. I am happy to be part of this initiative. There was so much positivity every day. I hope the positivity in all of us stays forever to make these kinds of programs in the future as well. 


ಚೌಪದಿ - 114

ಅರಿವು ಕೊಡುವನು ತಾನು ದಿನದಿನವು ಹೊರಹೊಮ್ಮಿ। 
ಬರವಿರದ ಬೆಳಕನ್ನು ಚೆಲ್ಲುತ್ತ ಜಗಕೆ॥ 
ನರಜಂತುಗಳಿಗೆ ದಯೆಯಿಂದನುಗ್ರಹಿಸೆ ತಾ।  
ಬರುತಿರುವನೆಡೆಬಿಡದೆಯನಿಕೇತನ॥ 114 ॥ 

Friday, May 21, 2021

ಚೌಪದಿ - 113

ಮರದಂತೆ ನಿಂತುಬಿಡು ಬೇರುಗಳ ಹರಡುತ್ತ। 
ನೆರಳನ್ನು ಕೊಡುವಂಥ ಬದುಕನ್ನು ಕಟ್ಟು॥ 
ಕರುಣೆಯಲಿ ಮಾತಾಡಿ ವಿಶ್ವಾಸವನು ತೋರೊ। 
ಸರಳತೆಯಲೇ ಸುಖವೊ - ಅನಿಕೇತನ॥ 113 ॥ 

Thursday, May 20, 2021

ಚೌಪದಿ - 112

ಬೀಗವನು ಹಾಕಿಬಿಡು ಬೇಕಿರದ ವಿಷಯಕ್ಕೆ। 
ಮಾಗುವುದು ಜ್ಞಾನದಾ ಕಡಲಿನಲಿ ಮನವು॥ 
ಬೇಗೆಯದು ತೀರದೋ ಕುಡಿಯುತಿರಲರಿವನ್ನು। 
ನೀಗದಾ ದಾಹವದು - ಅನಿಕೇತನ॥ 112 ॥ 

Wednesday, May 19, 2021

ಚೌಪದಿ - 111

ಹರಿಯುತಿರೆ ಜ್ಞಾನವದು ನದಿಯಾಗಿ ಮನದಲ್ಲಿ। 
ಹರಸುವರು ಚಿರಕಾಲ ನಲುಮೆಯಲಿ ಗುರುವು॥ 
ಹರಡುತಿರೆಯರಿವದನು ಚೌಪದಿಯ ಚೌಕದಲಿ। 
ಹರಿಹರರು ಹರಸುವರೊ - ಅನಿಕೇತನ॥ 111 ॥ 

Tuesday, May 18, 2021

ಚೌಪದಿ - 110

ಅರಿವನ್ನು ಕೊಡುವವಗೆ ನಮಿಸುತ್ತ ನಡೆಯುತಿರೆ। 
ಸರಿಯಾದ ದಾರಿಯಲಿ ದೊರಕುವುದು ಜ್ಞಾನ॥ 
ಗುರಿಯನ್ನು ತಲುಪಿದೊಡೆ ತುಳಿಯದಿರು ಯಾರನೂ।
ಗುರುವನ್ನು ಮರೆಯದಿರು - ಅನಿಕೇತನ॥ 110 ॥ 

#PrayForLokaKalyana Initiative.

A few like-minded people came together as a part of the #PrayForLokaKalyana initiative at the beginning of the month of May. Initially, it was an impromptu session for which we got great feedback and it continued for 11 days. 

For 11 days, we witnessed some wonderful voices who were part of the #VishnuSahasranama Chanting. 

We also planned for the 7pm session which was divine in its own sense. Here too, we witnessed some divine voices who chanted the #LalithaSahasranama along with some great #DeviStutis 

The chanting began on the auspicious day of the Ekadashi and culminated on the auspicious occasion of the #ShankaraJayanti where we listened to some beautiful KRtis by #AdiShankaracharya

Thanks to all the people who were involved in this noble cause. I am happy to be part of this initiative. There was so much positivity every day. I hope the positivity in all of us stays forever to make these kinds of programs in the future as well. 


Monday, May 17, 2021

।ಅದ್ವೈತ ಹಾಗೂ ಕಗ್ಗ।

ಅದ್ವೈತ ಹಾಗೂ ಕಗ್ಗ

ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು।
ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ॥
ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ।
ಜಡವೆ ಜೀವದ ವಸತಿ - ಮಂಕುತಿಮ್ಮ॥

ಶಾಲೆಯಲ್ಲಿ ನಾವು Living and Nonliving things ಬಗ್ಗೆ ಓದಿ ತಿಳಿದುಕೊಂಡಿದ್ದೇವೆ. ಆದರೆ, ಇದರ ಬಗ್ಗೆ ಶಾಲೆಯಲ್ಲಿ ಕಲಿತದ್ದಕ್ಕು, ವಾಸ್ತವತೆಗೂ ವ್ಯತ್ಯಾಸ ಇದೆಯಂತೆ ಎಂಬುದನ್ನು ಅನೇಕ ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ. 

ಆ ವೈಜ್ಞಾನಿಕ ಸಂಶೋಧನೆಗಳ ಪ್ರಕಾರವೂ ಯಾವುದೇ 'ಜಡ' ಎಂದು ಸೂಚಿಸುವ ವಸ್ತುಗಳಲ್ಲೂ ಅದ್ಯಾವುದೋ 'ಅಣು' (atoms) ರೂಪದ electron's, neutron, protonsಗಳು ತಮ್ಮ ಸೀಮಿತವಾದ ಪಥದಲ್ಲಿ ಸುತ್ತುತ್ತಿರುತ್ತವಂತೆ.‌ ಇಂತಹ ವೈಜ್ಞಾನಿಕ ಸಂಶೋಧನೆಗಳಿಗೂ ಮೊದಲೇ ಶ್ರೀ ಆದಿ ಶಂಕರರು ಇದರ ಬಗ್ಗೆ ತಮ್ಮ ಭಾಶ್ಯಗಳಲ್ಲಿ ವಿಸ್ತಾರವಾಗಿ ಜಗತ್ತಿಗೆ ತಿಳಿಸಿದ್ದಾರೆ.  ಮೇಲಿನ "ಕಗ್ಗ"ದ ತಿರುಳೂ ಸಹಾ ಅದನ್ನೇ ಪ್ರತಿಪಾದಿಸುತ್ತದೆ.

ಪ್ರಾಯಶಃ 'ಜಡ' ಮತ್ತು 'ಜೀವ' ವಸ್ತುಗಳ (living and non-living) ನಡುವೆ ಇರುವ ಅವಿನಾಭಾವ ಸಂಬಂಧಗಳನ್ನು ಇದಕ್ಕಿಂತ ಸುಲಭವಾಗಿ ಸ್ಪಷ್ಟವಾಗಿ ಡಿವಿಜಿಯವರಿಗಿಂತ ಮತ್ತೊಬ್ಬರು ಸ್ಪಷ್ಟೀಕರಿಸಲು ಸಾಧ್ಯವಿಲ್ಲವೇನೋ. ಆ ಆಯಾಮದಲ್ಲಿ ಚಿಂತನೆ ಮಾಡಿದಾಗ ಜಡ ವಸ್ತು, ಜೀವ ವಸ್ತುಗಳ ನಡುವೆ ಮೇಲ್ನೋಟಕ್ಕೆ ವ್ಯತ್ಯಾಸಗಳಿವೆ ಎನಿಸಿದರೂ ಅವು ಒಂದರಮೇಲೊಂದು ಅವಲಂಬಿಸಿರುವುದು ಸತ್ಯ. ಜಡವಸ್ತುಗಳಲ್ಲೂ ಯಾವುದೋ ಒಂದು ಚೈತನ್ಯ ಅಡಿಗಿರುವುದು ಖಚಿತ ಎಂಬುದು ಮೇಲಿನ ಕಗ್ಗದ ಸಾರಾಂಶ.

ಇದನ್ನೆ ಅಲ್ಲವೇ ಶ್ರೀ ಶ್ರೀ ಶ್ರೀ ಶಂಕರರು ತಮ್ಮ‌ ಅದ್ವೈತ ಸಿದ್ಧಾಂತದಲ್ಲಿ ಹೇಳಿದ್ದು: 
ಜೀವ, ಜಗತ್ತು ಮತ್ತು ಈಶ್ವರ.

||ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ||

ಜೀವ + ಜಗತ್ತು ಒಂದೇ, ಅದು ಮಿತ್ಯ. ಈಶ್ವರ ಒಬ್ಬನು ಮಾತ್ರವೇ ಸತ್ಯ. ಹಲವು ಅದ್ವೈತ ವಿರೋಧಿಗಳು ಇಲ್ಲಿನ 'ಮಿತ್ಯ' ಎಂಬುದನ್ನು 'ಸುಳ್ಳು' ಎಂದು ತಿರಿಚುವ ಪ್ರಯತ್ನಗಳಿಗೆ ಕೊರತೆಯಿಲ್ಲ. ಬಿಡಿ,ಅದು ಅವರವರ ಪ್ರಾರಬ್ಧ ಕರ್ಮವಷ್ಟೇ.

|'ಜಡ' ವಸ್ತುವಿನಲ್ಲಿ 'ಜೀವ'ದ ಚೈತನ್ಯ ಇರುವುದಾದರೂ ಹೇಗೆ?|

ನಾಗಾರಾಧನೆಯ ದಿನ ಬೆಳಗಿನಿಂದ ಉಪವಾಸ. ಎಲ್ಲರೂ ತನಿ ಎರೆದ ನಂತರ ಶ್ರೀ ಶ್ರೀನಿವಾಸ ದೇವಾಲಯದಲ್ಲಿ ಮಹಾ ಮಂಗಳಾರತಿ ಪ್ರಾರಂಭ. ಅದು ಕೊಂಚ ತಡವಾಗೋದು ಮಾಮೂಲು. ಆದರೆ, ಮಹಾ ಮಂಗಳಾರತಿಯ ನಂತರವೇ ಮಹಾ ಪ್ರಸಾದ, ವಿನಿಯೋಗ. ಮೊದಲೇ ಕೆಲವರಿಗೆ ಮಧುಮೇಹ, ಹೊಟ್ಟೆ ಚುರುಗುಟ್ಟುತ್ತಿದೆ. ಅಷ್ಟರಲ್ಲಿ "ಅನ್ನ ಸಂತರ್ಪಣಾ ನಿಧಿಗೆ'' ಒಂದಷ್ಟು ಹಣ ಸಂದಾಯ ಮಾಡಲು ಹೋದಾಗ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ವಿನಮ್ರತೆಯಿಂದ ಹಣ ಸ್ವೀಕರಿಸಿ, ರಸೀತಿ ಜೊತೆ ಒಂದು ತುಣುಕು 'ಕಲ್ಲು ಸಕ್ಕರೆ' ಕೊಟ್ಟಾಗ ಅದನ್ನು ಪ್ರಸಾದ ಎಂದು ಸ್ವೀಕರಿಸಿ ನಾಲಗೆಯ ಮೇಲಿಟ್ಟಾಗ, ಆ ನಿರ್ಜೀವ-ಜಡ ಕಲ್ಲುಸಕ್ಕರೆಯಿಂದ ದಕ್ಕಿದ ಚೈತನ್ಯವು ಉರುವಲಾಗಿ ದೇಹಕ್ಕೆ ಕ್ಷಣಕಾಲ ತಾತ್ಕಾಲಿಕ ನಿರಾಳ.

ಅಂತೂ ಊಟಕ್ಕೆ ಕೂತಾಯ್ತು, ಒಂದೊಂದೆ ಪಾಕಿಸಿದ ಪದಾರ್ಥಗಳು  ಎಲೆಯ ಮೂಲೆಗಳಲ್ಲಿ ಕುಳಿತಾಯ್ತು. ಅನ್ನದ ಮೇಲಿನ ತೊವ್ವೆ, ತುಪ್ಪ ಬರುವಷ್ಟರಲ್ಲಿ ಹಸಿವು ಮತ್ತೂ ಹೆಚ್ಚಾಯ್ತು. 'ಹರ ಹರ ಮಹಾದೇವ್' ಗೋವಿಂದ, ಗೋವಿಂದಾ, ಎಂಬ ನಾಮ ಸ್ಮರಣೆಯ ಸಮಯ ಬಂದಾಯ್ತು. ಪರಿಶಂಚನೆ, ಆಪೋಶನದ ನಂತರ ಪಾಯಸಕ್ಕೆ ಕೈ ಹಾಕಿದಾಗ ನೆಮ್ಮದಿಯ ನಿಟ್ಟುಸಿರು. 

ಇಲ್ಲಿ ಊಟಕ್ಕೆ ಬಡಿಸಿದ ಪದಾರ್ಥಗಳೆಲ್ಲವೂ ಜೀವ ಇಲ್ಲದ 'ಜಡ' ಪದಾರ್ಥಗಳು. ಅವು ಒಂದೊಂದೆ ನಮ್ಮ ದೇಹದೊಳಗೆ ಸೇರಿದಾಗ ಕೊಂಚ ಕೊಂಚವಾಗಿ ಜೀವಕ್ಕೆ ಚೈತನ್ಯ. ಅಂದರೆ ಜಡ ವಸ್ತುವಿನಲ್ಲಿ ಜೀವಕ್ಕೆ ಚೇತನ, ಚೈತನ್ಯ ನೀಡುವ ಅದಾವುದೋ ಅಗೋಚರ ಶಕ್ತಿ ಇದೆ ಎನ್ನುವುದು ಸತ್ಯವಾಯಿತಲ್ಲ. ಅದನ್ನೇ ನಾವು ನಿರಾಕಾರನಾದ 'ಬ್ರಹ್ಮನ್' ಈಶ್ವರ, ಶಕ್ತಿ, ಚೇತನ ಎನ್ನೋಣ. ನಮ್ಮಲ್ಲಿ ಒಂದು ಮಾತಿದೆ. "ಅನ್ನ (ಆಹಾರ) ಪರಬ್ರಹ್ಮ ಸ್ವರೂಪ" ಎನ್ನುವುದು ವಾಡಿಕೆ. 

ಲೋಹ, ಗಾಜು, ಪ್ಲಾಸ್ಟಿಕ್ ಗಳಿಂದ ತಯಾರಿಸಿದ ವಾಹನ 'ಜಡ' ವಸ್ತು. ಅದಕ್ಕೆ ಅನುಕೂಲವಾದ ಇಂಧನ ತುಂಬಿ, ಅದ್ಯಾವುದೋ ಗುಂಡಿ (button) ಒತ್ತಿದಾಗ, ವಾಹನ ಚಲಿಸುವುದು. ಅಲ್ಲಿನ ತಾಂತ್ರಿಕ ಕ್ರಿಯೆಗಳು ಏನೇ ಇರಲಿ, ಜಡ ಎನಿಸಿದ ವಾಹನ ಮತ್ತು ಇಂಧನದ ನಡುವಿನ ಕ್ರಿಯೆಯನ್ನು ತಾರ್ಕಿಕವಾಗಿ ಅಗೋಚರ ಚೇತನ, ಚೈತನ್ಯ, ಈಶ್ವರ, ಬ್ರಹ್ಮನ್ ಎನ್ನಬಹುದಲ್ಲಾ!

ಎರಡು ನುಣುಪಾದ ಕಲ್ಲುಗಳನ್ನು ಸತತವಾಗಿ ಉಜ್ಜಿದಾಗ ಆಗುವ ಘರ್ಷಣೆಯಿಂದ ಶಾಖ ಉತ್ಪನ್ನವಾದಾಗ, ಅಗ್ನಿಯ ಉಗಮ. ಜಡ ಕಲ್ಲಿನ ಚೂರುಗಳು ಮತ್ತು ಘರ್ಷಣೆಯ ಕ್ರಿಯೆಯಗಳ ನಡುವೆ ಇಟ್ಟ 'ಹತ್ತಿ'ಯ ಸಣ್ಣ ಚೂರಿನ ಮೂಲಕ ಜ್ವಾಲೆ ಉತ್ಪತ್ತಿಯಾಗಿದ್ದು ಹೇಗೆ.? ಅವುಗಳಲ್ಲಿ ಅಡಗಿರುವ ಚೈತನ್ಯ ಯಾವುದು?

ಎಲ್ಲೋ ಕಾಡಿನ ಮಧ್ಯದಲ್ಲಿ ಧುಮುಕುವ ಜಲಪಾತ, ಅದಕ್ಕೆ ಯಾವುದೋ ಯಂತ್ರಗಳನ್ನು ಕ್ರಮದಲ್ಲಿ ಜೋಡಿಸಿದಾಗ, ನೀರಿನ ಧುಮುಕುವ ರಭಸಕ್ಕೆ ಯಂತ್ರ ತಿರುಗಿತು. ಅಲ್ಲಿ ವಿದ್ಯುತ್ ಉತ್ಪತ್ತಿಯಾಯಿತು. ಅಲ್ಲಿಂದ ದೂರದ ಮನೆಗೆ ತಂತಿಯಲ್ಲಿ ವಿದ್ಯುತ್ ಹರಿದು ಮನೆಗೆ ಬಂತು. ಗುಂಡಿ ಒತ್ತಿದೊಡನೆ ಮನೆಯ ದೀಪ ಬೆಳಗಿತು. ಇಲ್ಲಿ ವಿದ್ಯುತ್ ಎಂಬ ಶಕ್ತಿ, ಚೈತನ್ಯ ಅಗೋಚರ. ನೀರು, ಯಂತ್ರ, ತಂತಿ, ವಿದ್ಯುತ್ ದೀಪದ ಬಲ್ಬು ಎಲ್ಲವೂ ಜಡ ವಸ್ತುಗಳು. ಹಾಗಿದ್ದಲ್ಲಿ ದೀಪದ ಬಲ್ಬಿಗೆ ತಂತಿಯ ಮೂಲಕ ಅಗೋಚರವಾದ ಚೇತನವೆಂಬ ವಿದ್ಯುತ್ ಹರಿದು ಬಂದದ್ದಾದರೂ ಹೇಗೆ?

ಈ ಎಲ್ಲ ಸಂದೇಹಗಳಿಗೆ ತಮ್ಮ ಸಿದ್ಧಾಂತಗಳ ಮೂಲಕ ನಮಗೆ ಸಮರ್ಪಕವಾದ ಉತ್ತರ ಕೊಟ್ಟು ನಮಗೆ ದಾರಿದೀಪವಾದ ಶ್ರೀ ಶ್ರೀ ಶ್ರೀ ಶಂಕರ ಭಗವದ್ಪಾದರಿಗೆ ಅನಂತಾನಂತ ನಮನಗಳು.

"ನಮಾಮಿ ಶಂಕರ"

ಎಲ್ಲಾ ಸನಾತನ ಬಂಧುಗಳಿಗೂ "ಶಂಕರ ಜಯಂತಿ"ಯ ಶುಭಕಾಮನೆಗಳು. 

Sunday, May 16, 2021

ಚೌಪದಿ - 109

ಅರಿವು ಗರಿಗೆದರಿರಲು ಲೋಕವನು ನೋಡುತಿರೆ। 
ಗುರಿಯು ಕಾಣಿಸುತಿಹುದು ಗುರುಗಳಿರೆ ಮುಂದೆ॥ 
ಗುರಿಯಿಲ್ಲದವನಿಗೇ ಸರಿದಾರಿಯಲಿ ನಡೆಸೊ। 
ಗುರುಗಳಿಗೆ ನೀ ನಮಿಸೊ - ಅನಿಕೇತನ॥ 109 ॥ 

Saturday, May 15, 2021

An auspicious milestone - An emotional moment.

I was going through my blogs on https://anil-ramesh.blogspot.com/

While I reading my Chaupadis, I started to think about the journey so far and tears rolled down involuntarily. 

A cousin of mine called me during that moment and appreciated my work by encouraging me to write more verses in Kannada. I couldn’t speak to her because I was overwhelmed by her gesture. 


With a heavy throat, I told her that I would call her later. She understood my situation and asked me if I was in tears. I said Yes and she teased me as always and the conversation ended with smiles on our faces. 


My wife was observing me all this while and she started to tease me as if I was a crybaby. Later, I got an emotional hug from her before she went to the kitchen to make some Coffee. 

ಚೌಪದಿ - 108

ನೂರೆಂಟು ನಾಮಗಳ ಸ್ತೋತ್ರವನು ಪಠಿಸಿರಲು। 
ನೂರೆಂಟು ಮಣಿಗಳಾ ಜಪಮಾಲೆ ಹಿಡಿದು॥ 
ನೂರೆಂಟು ವಿಘ್ನಗಳು ಕಳೆಯುತಿರಲನುದಿನವು। 
ನೂರೆಂಟು ಶುಭಫಲವೊ - ಅನಿಕೇತನ॥ 108 ॥ 

Friday, May 14, 2021

ಚೌಪದಿ - 107

ಹೆಕ್ಕಿಹೆನು ನೆನಪುಗಳನೊಂದೊಂದೆ ನಾನಿಂದು। 
ರೆಕ್ಕೆಯನು ಬಿಚ್ಚುತ್ತ ಹಾರುತಿರೆ ಮನವು॥ 
ದಿಕ್ಕುತಪ್ಪದೆ ಸಾಗಿಹೆನು ನೆನೆದು ಹಳೆಯದನು। 
ಉಕ್ಕುತಿರಲುನ್ಮಾದವನಿಕೇತನ॥ 107 ॥ 

Thursday, May 13, 2021

ಚೌಪದಿ - 106

ಆತುರವ ಪಡುವವಗೆ ತಾಳ್ಮೆಯದು ಬಲು ಕಡಿಮೆ। 
ಹಾತೊರೆಯುತಿರೆ ಮನವು ಸಂತಸವ ತುಂಬಿ॥ 
ಕಾತರವು ಹೆಚ್ಚುತಿರಲಾತುರವು ಹೆಚ್ಚುವುದು। 
ಆತುರವ ಬಿಟ್ಟಬಿಡೊ - ಅನಿಕೇತನ॥ 106 ॥ 

ಚೌಪದಿ - 105

ಅವಕಾಶಗಳು ಹಲವು ಬರುತಿರಲು ಬಾಳ್ಕೆಯಲಿ। 
ಸವಿನಯದಿ ಮನವಿಟ್ಟು ಮಾಡುನೀ ಕೆಲಸ॥ 
ಅವಿರತವುತಾನಿರಲು ಭಕ್ತಿಯದು ದುಡಿಮೆಯಲಿ। 
ನವ ಬದುಕು ಪಲ್ಕಿರಿವುದನಿಕೇತನ॥ 105 ॥ 

Wednesday, May 12, 2021

ಚೌಪದಿ - 104

ಹುರುಳಿರದೆ ಮಾತನಾಡುವ ಜನರು ಬಹಳಿಹರು। 
ಅರಿವನ್ನು ಅರ್ಥೈಸಿ ಕೊಳುವವರ ನಡುವೆ॥ 
ತಿರುಳಿರದ ವಿಷಯವನು ಕೆದಕುತ್ತ ಬದುಕುತಿರೆ। 
ನಿರುಪಯೋಗವು ಕೆಲರಿಗನಿಕೇತನ॥ 104 ॥ 

ಚೌಪದಿ - 103

ಜೀವನದೊಳುನ್ಮಾದವಾಗಿಹುದು ಹಲವರಿಗೆ।
ದೈವಾನುಭೂತಿಯನು ಭಕ್ತಿಯಲಿ ನಂಬಿ॥
ಸಾವಕಾಶದಿ ಬದುಕಿನವಕಾಶ ಹುಡುಕುತಿರೆ।
ದೈವವೇ ಮೆಚ್ಚುವುದು - ಅನಿಕೇತನ॥ 103 ॥

ಚೌಪದಿ - 102

ಹಾಯಾಗಿ ಹರಿದಿಹಳು ಪಾಪಗಳ ತೊಳೆಯುತ್ತ। 
ಆಯಾಸ ಮರೆಸುವಳು ಮಮತೆಯನು ತೋರಿ॥ 
ಮಾಯಾವಿ ನದಿಯಾಗಿ ಭಕ್ತರನು ಕಾಯುವಳು। 
ತಾಯಾಗಿ ಪೊರೆಯುವಳು - ಅನಿಕೇತನ॥ 102 ॥ 

Tuesday, May 11, 2021

ಚೌಪದಿ - 101

ಕಾರಿರುಳು ಕವಿದಿರಲು ಹೆದರಿಕೆಯದಾಗಿಹುದು। 
ದೂರದಲಿ ಗೆಜ್ಜೆಯಾ ಸಪ್ಪಳವ ಕೇಳಿ॥ 
ತೂರಿಬರುತಿದೆ ಗಾಳಿ ಜೋರಾದ ವೇಗದಲಿ। 
ಊರಿಹುದು ಭಯ ಮನದೆ - ಅನಿಕೇತನ॥ 101 ॥ 


ಚೌಪದಿ - 100

ಕಾರಣವ ಕೇಳಿದೊಡೆ ದಿಗಿಲಾಗುವುದುಯೆನಗೆ। 
ಪಾರುಗಾಣಿಸಲೆನ್ನ ಬಂದಿಹನು ದೊರೆಯು॥ 
ಸೇರಿಸಿಹೆನೊಂದೊಂದೆ ಹೆಕ್ಕಿಹೂಗಳ ದಿನವು। 
ನೂರು ಪದ್ಯದ ಮಾಲೆ - ಅನಿಕೇತನ॥ 100 ॥ 

Monday, May 10, 2021

ಚೌಪದಿ - 99

ಹೂರಣವನನುಭವಿಸಿ ತಿಂದಷ್ಟು ಸುಲಭವೇ। 
ಬಾರದಿಹ ಯೋಚನೆಯ ಕವಿತೆಯಾಗಿಸಲು॥ 
ಮೀರಿರುವ ಸತ್ಯವನು ಅನುಭವಿಸಲೋಸುಗವೆ। 
ಹೀರು ತತ್ವದ ಮಧುವ - ಅನಿಕೇತನ॥ 99 ॥ 

ಚೌಪದಿ - 98

ರಾಮನಿಗೆ ಕೌಸಲ್ಯೆ ಲಾಲಿಯನು ಹಾಡಿದಳು। 
ಶ್ಯಾಮನಿಗೆ ದೇವಕಿಯು ಜನ್ಮವನು ಕೊಡಲು॥ 
ನೇಮದಲಿ ನಾವೆಲ್ಲ ಪೂಜಿಸುತ ಹಾಡಿರಲು। 
ತಾಮಸವು ನೀಗುವುದೊ - ಅನಿಕೇತನ॥ 98 ॥ 


Sunday, May 09, 2021

ಚೌಪದಿ - 97

ಅಮ್ಮನಿಗೆ ದಿನದಿನವು ನಮಿಸುತಾ ಬಂದವಗೆ। 
ಅಮ್ಮನೇಯಾಗಿಹಳು ಜಗವೆಲ್ಲ ತನಗೆ॥ 
ಅಮ್ಮನಿಗೆ ತೋರಿಸಲು ಭೂಮಿಯನು ಬಾಯಲ್ಲಿ। 
ಅಮ್ಮನಿಗೆ ಭಾಗ್ಯವದೊ - ಅನಿಕೇತನ॥ 97 ॥ 

Saturday, May 08, 2021

ಚೌಪದಿ - 96

ಚಾರಣದ ಕಥೆಗಳನು ಕೇಳುತ್ತ ನಾವೆಲ್ಲ। 
ಹಾರಿದೆವು ಕಲ್ಪನೆಯ ಲೋಕಕ್ಕೆ ಜಿಗಿದು॥ 
ದಾರಿಗಳ, ಬೆಟ್ಟಗಳ, ಪಯಣಗಳ, ನೆನಪಿಸಿತು। 
ಚಾರಣದ ಕಥೆಗಳಲಿ - ಅನಿಕೇತನ॥ 96 ॥ 

Friday, May 07, 2021

ಚೌಪದಿ - 95

ಪರಬೊಮ್ಮ ಕೇಳಿರಲು ಭೀಷ್ಮನಾ ಮೊರೆಯನ್ನು। 
ಹರಸಿದನು ಸಂತಸದಿ ದೇವವ್ರತನನು॥ 
ಶರಶಯ್ಯೆಯಲಿ ಮಲಗಿ ಪಠಿಸಿರಲು ನಾಮಗಳ। 
ಹರಿಯೊಲುಮೆ ದೊರಕಿತ್ತು - ಅನಿಕೇತನ॥ 95 ॥ 

ಚೌಪದಿ - 94

ಅನುಭೂತಿ ತುಂಬಿಹುದು ವಿಷ್ಣುವಿನ ಒನಾಮದಲಿ। 
ವನಮಾಲಿಯನು ನೆನೆದು ದಿನದಿನವು ಸಾಗಿ॥ 
ಅನುದಿನವು ಹೇಳುತಿರೆ ಸಾವಿರದ ಹೆಸರುಗಳ। 
ಮನವಾಗುವುದು ಹಗುರವನಿಕೇತನ॥ 94 ॥ 

Thursday, May 06, 2021

ಚೌಪದಿ - 93

ಮನದಲ್ಲಿ ದಿನದಿನವು ಬೆಳೆಯುತಿರಲನುಭೂತಿ। 
ತನುವಲ್ಲಿ ಮೂಡುವುದು ಸಹನೆಯಾ ಶಕ್ತಿ॥ 
ಧನದಲ್ಲಿಯಳೆಯದೇ ಜನರನ್ನು ನೋಡಿದರೆ। 
ಒನಪಿನಲಿ ಬದುಕಬಹುದನಿಕೇತನ॥ 93 ॥






Monday, May 03, 2021

ಚೌಪದಿ - 92

ಅನುಭೂತಿಯನುತೋರು ಸುಖಪಡುವೆ ಬದುಕಿನಲಿ। 
ಮನುಕುಲಕೆ ಬೇಕಿಹುದು ಹೆಚ್ಚಾಗಿ ಸಹನೆ॥ 
ಅನುದಿನವು ಮಾಡುತಿರೆ ಕೆಲಸಗಳನೆಡೆಬಿಡದೆ। 
ಮನುಕುಲವೆ ಹರಸುವುದೊ - ಅನಿಕೇತನ॥ 92 ॥ 

Saturday, May 01, 2021

ಚೌಪದಿ - 91

ದುಡಿಯುತ್ತ ಹಗಲಿರುಳು ಬೇಸರವ ಪಡದೆಯೇ| 
ಮಿಡಿಯುವರು ಮನೆಮಂದಿಯಾ ಭಾವಗಳಿಗೆ|| 
ಹಿಡಿಯುವರು ಕೈಗಳನು ಜೊತೆಯಲ್ಲಿ ಸಾಗುತ್ತ| 
ನುಡಿದಂತೆ ನಡೆಯುವರೊ - ಅನಿಕೇತನ|| 91 || 

ಚೌಪದಿ - 90

ಹರಟೆಯಾ ಕಟ್ಟೆಯಲಿ ಭಾಗಿಯಾದವರೆಲ್ಲ। 
ಸರದಿಯಲಿ ಮಾತಾಡಿ ಹಾಡಿರಲು ನಲಿದು॥ 
ಬರಗಾಲದಲಿ ಮಳೆಯು ಹಿತವನೀಡುವ ಹಾಗೆ। 
ಪರಕಾಯ ಮನೆಮಾಡಲನಿಕೇತನ॥ 90 ॥